ಹಾಕಿ: ಕಾಮನ್‌ವೆಲ್ತ್ ಗೇಮ್ಸ್‌ಗೆ ಭಾರತ ‘ಎ’ ತಂಡಗಳು ನವದೆಹಲಿ:ಈ ವರ್ಷ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಗೇಮ್ಸ್‌ನ ಪುರುಷರ ಮತ್ತು ಮಹಿಳೆಯರ ಹಾಕಿ ಪಂದ್ಯಗಳಿಗೆ ತನ್ನ ಭಾರತ ತನ್ನ ‘ಎ’ ತಂಡಗಳನ್ನು ಕಳುಹಿಸಲಿದೆ. 2024ರ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ಏಷ್ಯನ್ ಗೇಮ್ಸ್ ಮತ್ತು ಕಾಮನ್‌ವೆಲ್ತ್ ಗೇಮ್ಸ್‌ ನಡುವೆ ಅಲ್ಪಾವಧಿಯು ಇರುವ ಕಾರಣದಿಂದ ಭಾರತವು ಏಷ್ಯನ್ ಗೇಮ್ಸ್‌ಗೆ ಮಹತ್ವ ನೀಡಲು ನಿರ್ಧರಿಸಿದೆ. ಭಾರತ ಒಲಿಂಪಿಕ್ ಸಂಸ್ಥೆಯ (ಐಒಎ) ಮತ್ತು ಅಂತರರಾಷ್ಟ್ರೀಯ ಹಾಕಿ ಫೆಡರೇಷನ್‌ನ (ಎಫ್‌ಐಎಚ್‌) ಅಧ್ಯಕ್ಷ ನರೀಂದರ್ ಬಾತ್ರಾ ಅವರು ಈ ಕುರಿತು ಸುತ್ತೋಲೆ ಹೊರಡಿಸಿದನ್ನು ಹಾಕಿ ಇಂಡಿಯಾದ ಅಧಿಕಾರಿಯೊಬ್ಬರು ಶನಿವಾರ ಖಚಿತಪಡಿಸಿದ್ದಾರೆ. ‘ನಮ್ಮ ಬಳಿ ಮೂರು ತಂಡಗಳಿವೆ. ಭಾರತ ಸೀನಿಯರ್, ಭಾರತ ಎ ಮತ್ತು ಜೂನಿಯರ್ ತಂಡಗಳು. ಈ ವರ್ಷ ಕಾಮನ್‌ವೆಲ್ತ್‌ ಗೇಮ್ಸ್‌ಗೆ ನಮ್ಮ ‘ಎ’ ತಂಡಗಳನ್ನು ಕಳುಹಿಸುತ್ತೇವೆ ಏಕೆಂದರೆ ನಮ್ಮ ಪ್ರಮುಖ ಆಟಗಾರರು ಏಷ್ಯನ್ ಗೇಮ್ಸ್‌ನಲ್ಲಿ ಆಡುವುದು ಮುಖ್ಯವಾಗಿದೆ‘ ಎಂದು ಹಾಕಿ ಇಂಡಿಯಾ ಅಧಿಕಾರಿ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ‘ಎರಡು ಕ್ರೀಡಾಕೂಟಗಳ ನಡುವೆ ಕೇವಲ 32 ದಿನಗಳ ಅಂತರವಿದೆ. ಹೀಗಾಗಿ ಏಷ್ಯನ್ ಗೇಮ್ಸ್ ತಂಡದ ಭಾಗವಾಗಿರದ ಕಾಯ್ದಿರಿಸಿದ ಆಟಗಾರರನ್ನು ಕಾಮನ್‌ವೆಲ್ತ್ ಗೇಮ್ಸ್‌ಗೆ ಕಳುಹಿಸುತ್ತೇವೆ‘ ಎಂದು ಅವರು ಹೇಳಿದ್ದಾರೆ. ಬರ್ಮಿಂಗ್‌ಹ್ಯಾಮ್‌ ಕಾಮನ್‌ವೆಲ್ತ್ ಗೇಮ್ಸ್‌ ಅನ್ನು ಜುಲೈ 28ರಿಂದ ಆಗಸ್ಟ್ 8ರವರೆಗೆ ನಿಗದಿಪಡಿಸಲಾಗಿದೆ. ಆದರೆ ಹ್ಯಾಂಗ್‌ಜೌ ಏಷ್ಯನ್ ಗೇಮ್ಸ್ ಈ ವರ್ಷ ಸೆಪ್ಟೆಂಬರ್ 10ರಿಂದ 25 ರವರೆಗೆ ನಡೆಯಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.