ಸ್ಟ್ರಾಂಡ್‌ಜಾ ಮೆಮೊರಿಯಲ್ ಬಾಕ್ಸಿಂಗ್ ಟೂರ್ನಿ: ನಾಲ್ಕರ ಘಟ್ಟಕ್ಕೆ ನಂದಿನಿ ನವದೆಹಲಿ: ಎದುರಾಳಿಯ ಮೇಲೆ ಸಂಪೂರ್ಣ ಆಧಿಪತ್ಯ ಸಾಧಿಸಿ ಗೆದ್ದ ಭಾರತದ ನಂದಿನಿ ಅವರು ಸ್ಟ್ರಾಂಡ್‌ಜಾ ಮೆಮೊರಿಯಲ್ ಬಾಕ್ಸಿಂಗ್ ಟೂರ್ನಿಯ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಇದರೊಂದಿಗೆ ಈ ಬಾರಿಯ ಟೂರ್ನಿಯಲ್ಲಿ ದೇಶಕ್ಕೆ ಮೊದಲ ಪದಕವನ್ನು ಖಚಿತಪಡಿಸಿದ್ದಾರೆ. ಬಲ್ಗೇರಿಯಾದ ಸೋಫಿಯಾದಲ್ಲಿ ನಡೆಯುತ್ತಿರುವ ಟೂರ್ನಿಯ +81 ಕೆಜಿ ವಿಭಾಗದ ಎಂಟರ ಘಟ್ಟದ ಹಣಾಹಣಿಯಲ್ಲಿ ಅವರು ಕಜಕಸ್ತಾನದ ವಲೇರಿಯಾ ಅಕ್ಸೆನೊವಾ ಅವರ ಸವಾಲು ಮೀರಿದರು. ನಂದಿನಿ ಅವರ ಬಿರುಸಿನ ಪಂಚ್‌ಗಳಿಗೆ ವಲೇರಿಯಾ ನಲುಗಿದರು. ಇದರಿಂದ ಮೂರನೇ ಸುತ್ತಿನಲ್ಲೇ ರೆಫರಿ ಬೌಟ್‌ಅನ್ನು ಸ್ಥಗಿತಗೊಳಿಸಬೇಕಾಯಿತು. ಭಾರತದ ಬಾಕ್ಸರ್‌ಗೆ ಸೆಮಿಫೈನಲ್‌ನಲ್ಲಿ ಕಜಕಸ್ತಾನದ ಲಾಜತ್‌ ಕುಂಗೆಬಯೇವಾ ಅವರು ಮುಖಾಮುಖಿಯಾಗಲಿದ್ದಾರೆ. ಲಾಜತ್ ಈ ಹಿಂದೆ ವಿಶ್ವ ಚಾಂಪಿಯನ್ ಆಗಿದ್ದರು. ಕ್ವಾರ್ಟರ್‌ಫೈನಲ್‌ಗೆ ಅರುಂಧತಿ, ಪರ್ವೀನ್‌: ವಿಶ್ವ ಯೂತ್ ಚಾಂಪಿಯನ್‌ ಅರುಂಧತಿ ಚೌಧರಿ (70 ಕೆಜಿ) ಮತ್ತು ಪರ್ವೀನ್‌ (63 ಕೆಜಿ) ಎಂಟರಘಟ್ಟಕ್ಕೆ ಲಗ್ಗೆಯಿಟ್ಟರು. ಅರುಂಧತಿ 3–0ಯಿಂದ ಜರ್ಮನಿಯ ಮೆಲಿಸಾ ಜೆಮಿನಿ ಅವರನ್ನು ಪರಾಭವಗೊಳಿಸಿದರೆ, ಪರ್ವೀನ್‌ ಅವರಿಗೆ 5–0ಯಿಂದ ಕಜಕಸ್ತಾನದ ಐಡಾ ಅಬಿಕೆಯೆವಾ ಎದುರು ಗೆಲುವು ಒಲಿಯಿತು. ಮೀನಾ ರಾಣಿ (60 ಕೆಜಿ), ಅಂಜಲಿ ತುಶೀರ್‌ (66 ಕೆಜಿ), ಸವೀಟಿ (75 ಕೆಜಿ), ಸಚಿನ್ ಕುಮಾರ್‌ (ಪುರುಷರ 80 ಕೆಜಿ) ತಮ್ಮ ಬೌಟ್‌ಗಳಲ್ಲಿ ನಿರಾಸೆ ಅನುಭವಿಸಿದರು. ಮೀನಾ2-3ರಿಂದ ರಷ್ಯಾದ ನ್ಯೂನ್‌ ಅಸ್ತರಿನ್‌ ಎದುರು, ಅಂಜಲಿ 0–5ರಿಂದ ರಷ್ಯಾದ ಸಾದತ್‌ ಡಲ್ಗಾಟೊವಾ ವಿರುದ್ಧ, ಸವೀಟಿ 0–5ರಿಂದ ಫ್ರಾನ್ಸ್‌ನ ಡೇವಿನಾ ಮಿಚೆಲ್‌ ಎದುರು ಮತ್ತು ಸಚಿನ್‌ 1–4ರಿಂದ ಜರ್ಮನಿಯ ಸಿಲ್ವಿಯೊ ಶಿರ್ಲಿ ಎದುರು ಮಣಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.