ವಿಶೇಷ ಒಲಿಂಪಿಕ್ಸ್‌: ಭಾರತಕ್ಕೆ 157 ಪದಕ ಬರ್ಲಿನ್‌: ಇಲ್ಲಿ ನಡೆಯುತ್ತಿರುವ ವಿಶೇಷ ಒಲಿಂಪಿಕ್ಸ್‌ನಲ್ಲಿ ಭಾರತದ ರೋಲರ್‌ ಸ್ಕೇಟಿಂಗ್‌ ಸ್ಪರ್ಧಿಗಳ ಪಾರುಪತ್ಯ ಮುಂದುವರಿಯಿತು. ಸ್ಪರ್ಧೆಯ ಕೊನೆಯ ದಿನ 2 ಚಿನ್ನ ಮತ್ತು ಮೂರು ಬೆಳ್ಳಿಯನ್ನು ಜಯಿಸುವ ಮೂಲಕ ಭಾರತ ಒಟ್ಟು 150 ಪದಕಗಳ ಗಡಿ ದಾಟಲು ನೆರವಾದರು. ಕೂಟದ ತೆರೆಗೆ ಒಂದು ದಿನ ಬಾಕಿ ಇರುವಂತೆ ಭಾರತವು 157 ಪದಕಗಳನ್ನು ಗೆದ್ದುಕೊಂಡಿದೆ. ಅದರಲ್ಲಿ 66 ಚಿನ್ನ, 50 ಬೆಳ್ಳಿ, 41 ಕಂಚಿನ ಪದಕಗಳು ಸೇರಿಕೊಂಡಿವೆ. ‌ರೋಲರ್ ಸ್ಕೇಟರ್‌ಗಳಾದ ಅರ್ಯಾನ್ (300 ಮೀ) ಮತ್ತು ದೀಪೆನ್ (1000 ಮೀ) ಚಿನ್ನ ಗೆದ್ದರು. ಪುರುಷರ 5x5 ಬ್ಯಾಸ್ಕೆಟ್‌ಬಾಲ್ ತಂಡವು ಪೋರ್ಚುಗಲ್ ತಂಡವನ್ನು 6-3 ಅಂತರದಿಂದ ಮಣಿಸಿ ಚಿನ್ನ ಗೆದ್ದಿತು. ಆದರೆ, ಮಹಿಳೆಯರ 5x5 ತಂಡ ಫೈನಲ್‌ನಲ್ಲಿ ಸ್ವೀಡನ್ ವಿರುದ್ಧ ಸೋತು ಬೆಳ್ಳಿಗೆ ತೃಪ್ತಿಪಟ್ಟುಕೊಂಡಿತು. ಮಹಿಳೆಯರ ವಾಲಿಬಾಲ್‌ನಲ್ಲಿ ಭಾರತವು ಯುಎಇ ತಂಡವನ್ನು ಮಣಿಸಿ ಚಿನ್ನ ಗೆದ್ದಿತು. ಪುರುಷರ ತಂಡ ಕಂಚು ಗೆದ್ದಿತು. ಮಹಿಳಾ ಹ್ಯಾಂಡ್‌ಬಾಲ್‌ ತಂಡವು ಬೆಳ್ಳಿ ಗೆದ್ದುಕೊಂಡಿತು. ಟೆನಿಸ್‌ನ ಪುರುಷರ ಸಿಂಗಲ್ಸ್‌ನಲ್ಲಿ ಸ್ವರಾಜ್ ಸಿಂಗ್ ಬೆಳ್ಳಿ ಗೆದ್ದರು. ಭಾನುವಾರ ನಡೆಯುವ ಅಂತಿಮ ದಿನದ ಪಂದ್ಯದಲ್ಲಿ ಭಾರತವು ಅಥ್ಲೆಟಿಕ್ಸ್, ಲಾನ್ ಟೆನಿಸ್ ಮತ್ತು ಸೈಕ್ಲಿಂಗ್‌ನಲ್ಲಿ ಪದಕಗಳಿಗಾಗಿ ಪೈಪೋಟಿ ನಡೆಸಲಿದೆ. 16 ಕ್ರೀಡೆಗಳಲ್ಲಿ ಸ್ಪರ್ಧಿಸಲು ಭಾರತದ 198 ಅಥ್ಲೀಟ್‌ಗಳು ಭಾಗವಹಿಸಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.