ವೇಟ್‌ಲಿಫ್ಟಿಂಗ್‌: ಜೆರೆಮಿಗೆ ಬೆಳ್ಳಿ ಜಿಂಜು, ಕೊರಿಯಾ (ಪಿಟಿಐ): ಭಾರತದ ವೇಟ್‌ಲಿಫ್ಟರ್‌ ಜೆರೆಮಿ ಲಾಲ್‌ರಿನುಂಗಾ ಅವರು ಇಲ್ಲಿ ನಡೆಯುತ್ತಿರುವ ಏಷ್ಯನ್‌ ವೇಟ್‌ಲಿಫ್ಟಿಂಗ್‌ ಚಾಂಪಿಯನ್‌ಷಿಪ್‌ನ ಪುರುಷರ 67 ಕೆ.ಜಿ. ವಿಭಾಗದ ಸ್ನ್ಯಾಚ್‌ನಲ್ಲಿ ಬೆಳ್ಳಿ ಗೆದ್ದರು. ಆದರೆ ಕ್ಲೀನ್‌ ಮತ್ತು ಜರ್ಕ್‌ನಲ್ಲಿ ಎಡವಿದ ಅವರು ಒಟ್ಟಾರೆ ಭಾರ ಎತ್ತುವಲ್ಲಿ ವಿಫಲರಾದರು. ಭಾನುವಾರ ನಡೆದ ಸ್ಪರ್ಧೆಯಲ್ಲಿ ಕಣದಲ್ಲಿದ್ದ 12 ಲಿಫ್ಟರ್‌ಗಳ ಪೈಕಿ ಒಟ್ಟಾರೆ ಭಾರ ಎತ್ತುವಲ್ಲಿ ವಿಫಲರಾದದ್ದು ಜೆರೆಮಿ ಮಾತ್ರ. 2022ರ ಕಾಮನ್‌ವೆಲ್ತ್‌ ಕೂಟದ ಬಳಿಕ ಅವರು ಪಾಲ್ಗೊಂಡ ಮೊದಲ ಸ್ಪರ್ಧೆ ಇದಾಗಿತ್ತು. 20 ವರ್ಷದ ಅವರು ಸ್ನ್ಯಾಚ್‌ನಲ್ಲಿ 141 ಕೆ.ಜಿ. ಭಾರ ಎತ್ತಿ, ವೈಯಕ್ತಿಕ ಶ್ರೇಷ್ಠ ಸಾಧನೆ ಸರಿಗಟ್ಟುವುದರೊಂದಿಗೆ ಎರಡನೆಯವರಾದರು. ಆರು ಪ್ರಯತ್ನಗಳಲ್ಲಿ (ಸ್ನ್ಯಾಚ್‌ನಲ್ಲಿ ಮೂರು, ಕ್ಲೀನ್‌ ಮತ್ತು ಜರ್ಕ್‌ನಲ್ಲಿ ಮೂರು) ಎರಡು ಸಲ ಮಾತ್ರ ಭಾರ ಎತ್ತುವಲ್ಲಿ ಜೆರೆಮಿ ಯಶ ಕಂಡರು. ಇತರ ನಾಲ್ಕು ಪ್ರಯತ್ನಗಳಲ್ಲಿ ವಿಫಲರಾದರು. ಸ್ನ್ಯಾಚ್‌ನಲ್ಲಿ ಮೊದಲ ಪ್ರಯತ್ನದಲ್ಲಿ 137 ಕೆ.ಜಿ ಎತ್ತಲು ವಿಫಲರಾದ ಅವರು ಎರಡನೇ ಪ್ರಯತ್ನದಲ್ಲಿ ಯಶಸ್ಸು ಸಾಧಿಸಿದರು. ಮೂರನೇ ಪ್ರಯತ್ನದಲ್ಲಿ 141 ಕೆ.ಜಿ.ಗೆ ಹೆಚ್ಚಿಸಿದರಲ್ಲದೆ, ಯಶ ಕಂಡು ಬೆಳ್ಳಿ ಗೆದ್ದರು. ಕ್ಲೀನ್‌ ಮತ್ತು ಜರ್ಕ್‌ನಲ್ಲಿ ಮೊದಲ ಎರಡು ಪ್ರಯತ್ನಗಳಲ್ಲಿ 165 ಕೆ.ಜಿ. ಭಾರ ಎತ್ತಲು ಸಾಧ್ಯವಾಗಲಿಲ್ಲ. ಆದರೂ ಮೂರನೇ ಪ್ರಯತ್ನದಲ್ಲಿ ಭಾರವನ್ನು 168 ಕೆ.ಜಿ.ಗೆ ಹೆಚ್ಚಿಸುವ ಧೈರ್ಯ ತೋರಿದರು. ಅಲ್ಲೂ ವಿಫಲರಾದ್ದರಿಂದ ಒಟ್ಟಾರೆಯಾಗಿ ಅವರು ಸ್ಪರ್ಧೆ ಕೊನೆಗೊಳಿಸಲು ವಿಫಲರಾದರು. ಒಟ್ಟು 320 ಕೆ.ಜಿ. ಭಾರ ಎತ್ತಿದ ಚೀನಾದ ಹಿ ಯುಯಿಜಿ (147 ಕೆ.ಜಿ+ 173 ಕೆ.ಜಿ) ಚಿನ್ನ ಗೆದ್ದರು. ಸ್ಥಳೀಯ ಲಿಫ್ಟರ್‌ ಲೀ ಸಾಂಗ್‌ಯೊನ್ (139+ 175) ಅವರು ಬೆಳ್ಳಿ ಹಾಗೂ ಉಜ್ಬೆಕಿಸ್ತಾನದ ಎರ್ಗಶೆವ್ ಅದ್ಕಮ್‌ಜೊನ್‌ (138+ 174) ಕಂಚು ತಮ್ಮದಾಗಿಸಿಕೊಂಡರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.