ರಷ್ಯಾ–ಉಕ್ರೇನ್ ಸಂಘರ್ಷ: ರಗ್ಬಿ ಕ್ರೀಡೆಯಿಂದ ರಷ್ಯಾ, ಬೆಲರೂಸ್‌ ಅಮಾನತು ‌ಲಂಡನ್: ಉಕ್ರೇನ್‌ನಲ್ಲಿ ಅತಿಕ್ರಮಣ ನಡೆಸುತ್ತಿರುವ ರಷ್ಯಾ ಹಾಗೂ ಅದರ ಮಿತ್ರ ರಾಷ್ಟ್ರ ಬೆಲರೂಸ್‌ ಅನ್ನು ಅಂತರರಾಷ್ಟ್ರೀಯ ರಗ್ಬಿ ಕ್ರೀಡೆಯಿಂದ ಅಮಾನತು ಮಾಡಲಾಗಿದೆ ಎಂದು ವಿಶ್ವ ರಗ್ಬಿ ಒಕ್ಕೂಟ (ವರ್ಲ್ಡ್‌ ರಗ್ಬಿ) ಪ್ರಕಟಿಸಿದೆ. ರಷ್ಯಾವನ್ನು 'ವರ್ಲ್ಡ್‌ ರಗ್ಬಿ' ಸದಸ್ಯತ್ವದಿಂದಲೂ ಅನಿರ್ದಿಷ್ಟಾವಧಿಗೆ ತೆಗೆದುಹಾಕಲಾಗಿದೆ. ಇದರಿಂದಾಗಿ, ಮುಂದಿನ ವರ್ಷ ಫ್ರಾನ್ಸ್‌ನಲ್ಲಿ ನಡೆಯುವ ರಗ್ಬಿ ವಿಶ್ವಕಪ್‌ನ ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಸೆಣಸುವ ಅವಕಾಶವನ್ನೂ ರಷ್ಯಾ ಕಳೆದುಕೊಂಡಿದೆ. 'ಉಕ್ರೇನ್‌ ಮೇಲೆ ಆಕ್ರಮಣಕಾರಿಯಾಗಿ ಅತಿಕ್ರಮಣ ಮುಂದುವರಿಸಿರುವ ರಷ್ಯಾ ಮತ್ತು ಅದನ್ನು ಬೆಂಬಲಿಸುತ್ತಿರುವ ಬೆಲರೂಸ್‌ ವಿರುದ್ಧದ ಖಂಡನೆಯನ್ನುವಿಶ್ವ ರಗ್ಬಿ ಮತ್ತೊಮ್ಮೆ ಒತ್ತಿ ಹೇಳುತ್ತಿದೆ' ಎಂದು ಕಟು ಶಬ್ದಗಳಲ್ಲಿ ಉಲ್ಲೇಖಿಸಿದೆ. :ರಷ್ಯಾ–ಉಕ್ರೇನ್ ಸಂಘರ್ಷ | 5 ಲಕ್ಷಕ್ಕೂ ಅಧಿಕ ಜನರು ಉಕ್ರೇನ್ ತೊರೆದಿದ್ದಾರೆ- ವಿಶ್ವಸಂಸ್ಥೆ 'ರಗ್ಬಿ ಕುಟುಂಬವನ್ನು ರಕ್ಷಿಸಲು ಮತ್ತು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಶಿಫಾರಸಿಗೆ ಅನುಗುಣವಾಗಿ ರಗ್ಬಿಒಕ್ಕೂಟದ ಕಾರ್ಯಕಾರಿ ಸಮಿತಿಯು, ಇಂದು ತಕ್ಷಣದ ಹೆಚ್ಚುವರಿ ಕ್ರಮಗಳನ್ನು ಕೈಗೊಂಡಿದೆ. ಅಂತರರಾಷ್ಟ್ರೀಯ ರಗ್ಬಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳದಂತೆ ರಷ್ಯಾ ಮತ್ತು ಬೆಲರೂಸ್‌ ಮೇಲೆ ಹೇರಿರುವ ಅಮಾನತು ಮುಂದಿನ ಆದೇಶದವರೆಗೆ ತಕ್ಷಣದಿಂದಲೇ ಜಾರಿಗೆ ಬರಲಿದೆ' ಎಂದು ಹೇಳಿದೆ. ಮುಂದುವರಿದು,'ರಗ್ಬಿ ಆಟದ ಏಕತೆ, ಸಮಗ್ರತೆ ಮತ್ತು ಗೌರವ –ಮೌಲ್ಯಗಳ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ' ಎಂದು ಪ್ರತಿಪಾದಿಸಿದೆ. 2011 ಮತ್ತು 2019ರಲ್ಲಿ ರಗ್ಬಿ ವಿಶ್ವಕಪ್‌ ಟೂರ್ನಿಯಲ್ಲಿ ಆಡುವ ಅರ್ಹತೆ ಗಿಟ್ಟಿಸಿದ್ದ ರಷ್ಯಾ, ಪ್ರಶಸ್ತಿ ಗೆಲ್ಲಲು ವಿಫಲವಾಗಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.