ಈಜಿಪ್ಟ್‌ನ ಕೈರೊದಲ್ಲಿ ಐಎಸ್‌ಎಸ್‌ಎಫ್‌ ವಿಶ್ವಕಪ್ ಶೂಟಿಂಗ್‌ ಕೈರೊ: ಯುವ ಶೂಟರ್‌ ಸೌರಭ್ ಚೌಧರಿ ಅವರು ಭಾರತಕ್ಕೆ ಐಎಸ್‌ಎಸ್‌ಎಫ್‌ ವಿಶ್ವಕಪ್‌ ಟೂರ್ನಿಯಲ್ಲಿ ಈ ವರ್ಷದ ಮೊದಲ ಚಿನ್ನದ ಪದಕ ಗೆದ್ದುಕೊಟ್ಟಿದ್ದಾರೆ. ಇಲ್ಲಿ ನಡೆದ ಟೂರ್ನಿಯ 10 ಮೀಟರ್ಸ್ ಏರ್‌ ಪಿಸ್ತೂಲ್ ವಿಭಾಗದಲ್ಲಿ ಅವರಿಗೆ ಮಂಗಳವಾರ ಅಗ್ರಸ್ಥಾನ ಒಲಿಯಿತು. ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ, 19 ವರ್ಷದ ಸೌರಭ್‌ ಫೈನಲ್ ಹಣಾಹಣಿಯಲ್ಲಿ 16 ಸ್ಕೋರ್ ದಾಖಲಿಸಿದರು. ಇದರೊಂದಿಗೆ ಜರ್ಮನಿಯ ಮೈಕೆಲ್‌ ಶ್ವಾಲ್ಡ್‌ (6) ಸವಾಲು ಮೀರಿದರು. ರಷ್ಯಾದ ಅರ್ಟೆಮ್‌ ಚೆರ್ನೊಸೊವ್ ಅವರು ಕಂಚಿನ ಪದಕ ಗೆದ್ದುಕೊಂಡರು. ಉಕ್ರೇನ್‌ನೊಂದಿಗಿನ ಸಂಘರ್ಷದಿಂದಾಗಿ ರಷ್ಯಾದ ಶೂಟರ್‌ಗಳಿಗೆ ತಮ್ಮ ದೇಶದ ಧ್ವಜದಡಿ ಸ್ಪರ್ಧಿಸಲು ಅವಕಾಶ ನೀಡಿಲ್ಲ. ಒಲಿಂಪಿಯನ್‌ ಹಾಗೂ ಯೂತ್‌ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಸೌರಭ್‌,10 ಮೀ. ಏರ್‌ ಪಿಸ್ತೂಲ್‌ನ ಅರ್ಹತಾ ಸುತ್ತನ್ನು 584 ಪಾಯಿಂಟ್ಸ್‌ನೊಂದಿಗೆ ಮೂರನೆಯವರಾಗಿ ಕೊನೆಗೊಳಿಸಿದ್ದರು. ಅಗ್ರ ಎಂಟು ಮಂದಿಯೊಂದಿಗೆ ಫೈನಲ್ಸ್‌ಗೆ ಅರ್ಹತೆ ಗಳಿಸಿದ್ದರು. ಇಶಾ ಸಿಂಗ್‌, ಶ್ರೀ ನಿವೇತಾ ಮತ್ತು ರುಚಿತಾ ವಿನೆರ್ಕರ್ ಅವರು 10 ಮೀ. ಏರ್‌ ಪಿಸ್ತೂಲ್‌ ಮಹಿಳಾ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಫೆಬ್ರುವರಿ 26ರಂದು ಆರಂಭವಾಗಿರುವ ಟೂರ್ನಿಯು ಮಾರ್ಚ್‌ 8ರವರೆಗೆ ನಡೆಯಲಿದೆ. 60 ದೇಶಗಳ 500ಕ್ಕೂ ಹೆಚ್ಚು ಶೂಟರ್‌ಗಳು ಟೂರ್ನಿಯಲ್ಲಿ ಭಾಗವಹಿಸಿದ್ದಾರೆ. 20 ವಿಭಾಗಗಳಲ್ಲಿ ಪದಕಗಳಿಗಾಗಿ ಪೈಪೋಟಿ ನಡೆಸುತ್ತಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.