ರಷ್ಯಾ ಅನುಪಸ್ಥಿಯಲ್ಲಿ ಚಳಿಗಾಲದ ಪ್ಯಾರಾಲಿಂಪಿಕ್ಸ್‌ಗೆ ಚಾಲನೆ ಬೀಜಿಂಗ್‌: 2022ರ ಚಳಿಗಾಲದ ಪ್ಯಾರಾಲಿಂಪಿಕ್ಸ್‌ಗೆಶುಕ್ರವಾರ ರಷ್ಯಾ ಮತ್ತು ಬೆಲಾರೂಸ್ ಅಥ್ಲೀಟ್‌ಗಳಿಲ್ಲದೆ ಚಾಲನೆ ನೀಡಲಾಯಿತು. ಯುದ್ಧಭೂಮಿಯಿಂದ ತಪ್ಪಿಸಿಕೊಂಡು ಬಂದ ಉಕ್ರೇನ್ ತಂಡವು ಕೂಟದಲ್ಲಿ ಪಾಲ್ಗೊಂಡ ಸಂತಸ ಅನುಭವಿಸಿತು. ‘ಪ್ಯಾರಾಲಿಂಪಿಕ್ಸ್‌ನಲ್ಲಿ ನಾವು ಪಾಲ್ಗೊಳ್ಳುವಂತಾಗಿದ್ದು ಒಂದು ಪವಾಡ‘ ಎಂದು ಉಕ್ರೇನ್‌ ಪ್ರತಿನಿಧಿಗಳ ಮುಖ್ಯಸ್ಥ ವಲೇರಿ ಸುಶ್ಕೆವಿಚ್‌ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಬೀಜಿಂಗ್‌ನಲ್ಲಿ ಚಳಿಗಾಲದ ಒಲಿಂಪಿಕ್ಸ್ ಮುಗಿದ ನಂತರ ಉಕ್ರೇನ್ ಮೇಲೆ ರಷ್ಯಾದ ಆಕ್ರಮಣವು ಜಗತ್ತನ್ನು ಬೆಚ್ಚಿಬೀಳಿಸಿದೆ. ಕ್ರೀಡಾ ಪ್ರಪಂಚವೂ ಇದಕ್ಕೆ ಹೊರತಾಗಿಲ್ಲ. ರಷ್ಯಾ ಮತ್ತು ಬೆಲಾರೂಸ್‌ ಕ್ರೀಡಾಪಟುಗಳಿಗೆಪ್ಯಾರಾಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲು ಅನುಮತಿಸಲಾಗುವುದು ಎಂದುಆಯೋಜಕರು ಆರಂಭದಲ್ಲಿ ಪ್ರಕಟಿಸಿದ್ದರು. ಆದರೆ ಕೂಟ ಆರಂಭಕ್ಕೆ ಒಂದು ದಿನ ಇರುವಂತೆಯೇ ಆದೇಶ ಹಿಂಪಡೆದಿದ್ದರು. ಕ್ರೀಡಾಗ್ರಾಮದಲ್ಲಿ ಉಂಟಾದ ಉದ್ವಿಗ್ನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಎರಡೂ ದೇಶಗಳ ಕ್ರೀಡಾಪಟುಗಳನ್ನು ಹೊರಹಾಕಲಾಗಿದೆ ಎಂದು ಅವರು ಕಾರಣ ನೀಡಿದ್ದಾರೆ. ಉಕ್ರೇನ್‌ ತಂಡದ ಸದಸ್ಯರು ಬೀಜಿಂಗ್ ತಲುಪಲು ನಾಲ್ಕು ದಿನಗಳನ್ನು ತೆಗೆದುಕೊಂಡರು ಎಂದು ಶುಷ್ಕೆವಿಚ್ ಹೇಳಿದ್ದಾರೆ. ಪ್ರಯಾಣದ ಕೊನೆಯ ಎರಡು ದಿನಗಳಲ್ಲಿ ತಾನು ಬೆನ್ನುನೋವಿನಿಂದ ಬಳಲಿದ್ದೆಎಂದು ಅವರು ಹೇಳಿದ್ದಾರೆ. ‘ಬರ್ಡ್ಸ್ ನೆಸ್ಟ್‘ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸಮಾರಂಭದೊಂದಿಗೆ ಪ್ಯಾರಾಲಿಂಪಿಕ್ಸ್‌ಗೆ ಚಾಲನೆ ನೀಡಲಾಯಿತು. ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ಅಂತರರಾಷ್ಟ್ರೀಯ ಪ್ಯಾರಾಲಿಂಪಿಕ್ ಸಮಿತಿಯ ಅಧ್ಯಕ್ಷ ಆಂಡ್ರ್ಯೂ ಪಾರ್ಸನ್ಸ್ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು. ಮಾರ್ಚ್ 13ರಂದು ಕ್ರೀಡಾಕೂಟಕ್ಕೆ ತೆರೆಬೀಳಿದೆ. ವಿಶ್ವಕಪ್ ಫುಟ್‌ಬಾಲ್‌ ನಿಷೇಧದ ವಿರುದ್ಧ ಮೊಕದ್ದಮೆಗೆ ರಷ್ಯಾ ಸಿದ್ಧ:ವಿಶ್ವಕಪ್‌ ಫುಟ್‌ಬಾಲ್‌ ಪ್ಲೇಆಫ್‌ ಪಂದ್ಯಗಳಿಗೆ ಮುಂಚಿತವಾಗಿ ತನಗೆ ಅಂತರರಾಷ್ಟ್ರೀಯ ಫುಟ್‌ಬಾಲ್‌ನಿಂದ ನಿರ್ಬಂಧ ಹೇರಿದ್ದನ್ನು ಕ್ರೀಡಾ ನ್ಯಾಯಾಲಯದಲ್ಲಿ ಪ್ರಶ್ನಿಸಲು ರಷ್ಯಾ ಸಿದ್ಧತೆ ನಡೆಸಿದೆ. ರಷ್ಯಾ ಫುಟ್‌ಬಾಲ್ ಒಕ್ಕೂಟ ಮತ್ತು ತನ್ನ ರಾಷ್ಟ್ರೀಯ ಮತ್ತು ಕ್ಲಬ್ ತಂಡಗಳನ್ನು ಅಂತರರಾಷ್ಟ್ರೀಯ ಸ್ಪರ್ಧೆಗಳಿಂದ ಹೊರಗಿಡುವ ಫಿಫಾ ಮತ್ತು ಯೂರೋಪಿಯನ್‌ ಫುಟ್‌ಬಾಲ್ ಸಂಸ್ಥೆಗಳ ಒಕ್ಕೂಟದ (ಯುಇಎಫ್‌ಎ) ಜಂಟಿ ನಿರ್ಧಾರದ ವಿರುದ್ಧ ಔಪಚಾರಿಕ ಮೇಲ್ಮನವಿ ಸಲ್ಲಿಸಲು ಸಿದ್ಧವಾಗಿದೆ. ರಷ್ಯಾದ ಪುರುಷರ ರಾಷ್ಟ್ರೀಯ ತಂಡವು ಇನ್ನು 20 ದಿನಗಳ ಬಳಿಕ ಅರ್ಹತಾ ಪ್ಲೇಆಫ್ ಸೆಮಿಫೈನಲ್‌ನಲ್ಲಿ ಪೋಲೆಂಡ್‌ ಎದುರು ಆಡಲಿದೆ. ಪ್ಲೇಆಫ್ ಫೈನಲ್ಸ್ ಐದು ದಿನಗಳ ನಂತರ ನಡೆಯಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.