ಹಾಕಿ ಲೀಗ್‌: ಪೋಸ್ಟಲ್‌ಗೆ ಮಣಿದ ಸಾಯ್‌ ತಂಡ ಬೆಂಗಳೂರು: ಜಿದ್ದಾಜಿದ್ದಿಯ ಪೈಪೋಟಿಯ ಮೊದಲಾರ್ಧದಲ್ಲೂ ದ್ವಿತೀಯಾರ್ಧದಲ್ಲೂ ಗೋಲು ಗಳಿಸಿದ ಪೋಸ್ಟಲ್ ತಂಡ ಹಾಕಿ ಕರ್ನಾಟಕ ಲೀಗ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಜಯ ಗಳಿಸಿತು. ನಗರದ ಎಫ್‌ಎಂಕೆಎಂಸಿ ಹಾಕಿ ಅರೆನಾದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಭಾರತ ಕ್ರೀಡಾ ಪ್ರಾಧಿಕಾರ (ಸಾಯ್) ತಂಡವನ್ನು ಪೋಸ್ಟಲ್ 2–1ರಲ್ಲಿ ಮಣಿಸಿತು. ರಮೇಶ್ ಎಚ್‌.ಟಿ ಐದನೇ ನಿಮಿಷದಲ್ಲಿ ಮತ್ತು ಪೂವಣ್ಣ ಐ.ಎ 37ನೇ ನಿಮಿಷದಲ್ಲಿ ಗೋಲು ಗಳಿಸಿದರು. ಸಾಯ್‌ಗಾಗಿ 24ನೇ ನಿಮಿಷದಲ್ಲಿ ಸೂರ್ಯ ಚೆಂಡನ್ನು ಗುರಿ ಸೇರಿಸಿದರು. ಮತ್ತೊಂದು ಪಂದ್ಯದಲ್ಲಿ ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್ ಆ್ಯಂಡ್ ಸೆಂಟರ್ (ಎಂಇಜಿ) 4–1ರಲ್ಲಿ ಅಕೌಂಟೆಂಟ್‌ ಜನರಲ್ ಆಫೀಸ್ ಆ್ಯಂಡ್ ರಿಕ್ರಿಯೇಷನ್ ಕ್ಲಬ್ (ಎಜಿಒಆರ್‌ಸಿ) ಎದುರು ಜಯ ಗಳಿಸಿತು. ಎಂಇಜಿ ತಂಡದ ಪರ ದಿಶಾಂತ್‌ ಎಚ್‌.ಆರ್ (26ನೇ ನಿಮಿಷ), ದಿಲಾನ್ ಎಂ.ಪಿ (37ನೇ ನಿ), ಸುಬ್ಬಯ್ಯ ಸಿ.ಎ (43ನೇ ನಿ) ಮತ್ತು ಸುನಿಲ್ ಜಿ.ಎ (57ನೇ ನಿ) ಗೋಲು ಗಳಿಸಿದರು. ಸಾತ್ವಿಕ್ (34ನೇ ನಿ)ಎಜಿಒಆರ್‌ಸಿಗಾಗಿ ಏಕೈಕ ಗೋಲು ಗಳಿಸಿದರು. ಮಿಂಚಿದ ಹುಮೈಜ್‌ ಇದೇ ಅಂಗಣದಲ್ಲಿ ನಡೆದ ಕರ್ನಾಟಕ ರಾಜ್ಯ ಜೂನಿಯರ್ (19 ವರ್ಷದೊಳಗಿನವರು) ಪುರುಷರ ವಿಭಾಗದ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಹುಮೈಜ್ ಆರು ಗೋಲು ಗಳಿಸಿ ಸಂಭ್ರಮಿಸಿದರು. ಅವರ ಅಮೋಘ ಆಟದ ಬಲದಿಂದ ಡಿವೈಇಎಸ್ ‘ಬಿ’ ತಂಡ 14–0ಯಿಂದ ಹುಬ್ಬಳ್ಳಿ ಹಾಕಿ ಅಕಾಡೆಮಿಯನ್ನು ಮಣಿಸಿತು. ಹುಮೈಜ್ (4,18,26,29,50,54ನೇ ನಿ), ಸಪನ್ (9ನೇ ನಿ), ವೃಷಭ್‌ (20ನೇ ನಿ), ದೇವಯ್ಯ (36, 40,44ನೇ ನಿ), ಗೌರವ್‌ (41ನೇ ನಿ), ಮೋಕ್ಷಿತ್ (53ನೇ ನಿ), ರೋನಕ್ ತಿಮ್ಮಯ್ಯ (59ನೇ ನಿ) ಚೆಂಡನ್ನು ಗುರಿ ಮುಟ್ಟಿಸಿದರು. ಸಾಯ್‌ ತಂಡ ಬೆಂಗಳೂರು ಹಾಕಿ ಅಕಾಡೆಮಿಯನ್ನು 3–1ರಲ್ಲಿ ಸೋಲಿಸಿತು. ಸಾಯ್‌ಗಾಗಿ ಅಖಿಲ್ ಅಯ್ಯಪ್ಪ (22ನೇ ನಿ), ಧ್ರುವ ಕೆ.ಆರ್‌ (24ನೇ ನಿ), ಕಿರಣ್ ರೆಡ್ಡಿ (50ನೇ ನಿ) ಗೋಲು ಗಳಿಸಿದರೆ ಶ್ರವಣ್ (27ನೇ ನಿ) ಬೆಂಗಳೂರು ಹಾಕಿ ಅಕಾಡೆಮಿ ಪರ ಮಿಂಚಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.