ಪ್ರವೀಣ್‌, ಪಾರುಲ್‌ ರಾಷ್ಟ್ರೀಯ ದಾಖಲೆ ನವದೆಹಲಿ (ಪಿಟಿಐ): ಭಾರತದ ಅಥ್ಲೀಟ್‌ಗಳಾದ ಪಾರುಲ್‌ ಚೌಧರಿ ಮತ್ತು ಅವಿನಾಶ್‌ ಸಬ್ಳೆ ಅವರು ಕ್ರಮವಾಗಿ ಮಹಿಳೆಯರ ಮತ್ತು ಪುರುಷರ 5000 ಮೀ. ಓಟದಲ್ಲಿ ರಾಷ್ಟ್ರೀಯ ದಾಖಲೆ ಸ್ಥಾಪಿಸಿದರೆ, ಪ್ರವೀಣ್‌ ಚಿತ್ರವೇಲ್‌ ಅವರು ಟ್ರಿಪಲ್‌ ಜಂಪ್‌ನಲ್ಲಿ ಹೊಸ ದಾಖಲೆ ಬರೆದರು. ಕ್ಯೂಬಾದ ಹವಾನಾದಲ್ಲಿ ಶನಿವಾರ ನಡೆದ ಅಥ್ಲೆಟಿಕ್‌ ಕೂಟದಲ್ಲಿ ಪ್ರವೀಣ್‌ 17.37 ಮೀ. ದೂರ ಜಿಗಿದು ಅಗ್ರಸ್ಥಾನ ಪಡೆದರು. ವಿಶ್ವ ಅಥ್ಲೆಟಿಕ್ಸ್‌ನಲ್ಲಿ ‘ಎಫ್‌’ ಕೆಟಗರಿಯ ಸ್ಪರ್ಧೆ ಇದಾಗಿದೆ. ರೆಂಜಿತ್‌ ಮಹೇಶ್ವರಿ 2016 ರಲ್ಲಿ ಮಾಡಿದ್ದ ದಾಖಲೆಯನ್ನು (17.30 ಮೀ.) ಪ್ರವೀಣ್‌ ಮುರಿದರು. ಮಾತ್ರವಲ್ಲ, 2023 ರಲ್ಲಿ ಬುಡಾಪೆಸ್ಟ್‌ನಲ್ಲಿ ನಡೆಯಲಿರುವ ವಿಶ್ವ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ಗೆ ಅರ್ಹತೆ ಪಡೆದರು. ವಿಶ್ವ ಅಥ್ಲೆಟಿಕ್‌ ಕೂಟಕ್ಕೆ ಅರ್ಹತಾ ಮಟ್ಟವನ್ನು 17.20 ಮೀ.ಗೆ ನಿಗದಿಪಡಿಸಲಾಗಿದೆ. 21 ವರ್ಷದ ಪ್ರವೀಣ್‌ ಅವರ ಈ ಹಿಂದಿನ ವೈಯಕ್ತಿಕ ಶ್ರೇಷ್ಠ ಸಾಧನೆ 17.18 ಮೀ. ಆಗಿತ್ತು. ಕಳೆದ ವರ್ಷ ಚೆನ್ನೈನಲ್ಲಿ ನಡೆದಿದ್ದ ಅಂತರ ರಾಜ್ಯ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ನಲ್ಲಿ ಈ ದೂರ ಕಂಡುಕೊಂಡಿದ್ದರು. ಚಿತ್ರವೇಲ್‌ ಅವರು ಕ್ಯೂಬಾದಲ್ಲಿ ಅದೇ ದೇಶದ ಕೋಚ್‌ ಯೊಯಂಡ್ರಿ ಬೆತನ್ಸೊಸ್‌ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಇದೇ ವಿಭಾಗದಲ್ಲಿ ಸ್ಪರ್ಧಿಸಿದ ಭಾರತದ ಟಿ. ಸೆಲ್ವ ಪ್ರಭು 16.58 ಮೀ. ಸಾಧನೆಯೊಂದಿಗೆ ನಾಲ್ಕನೇ ಸ್ಥಾನ ಪಡೆದರು. 20 ವರ್ಷದೊಳಗಿನವರ ವಿಭಾಗದಲ್ಲಿ ಇದು ರಾಷ್ಟ್ರೀಯ ದಾಖಲೆಯಾಗಿದೆ. ಅವಿನಾಶ್‌ ಮತ್ತು ಪಾರುಲ್‌ ಅವರು ಲಾಸ್‌ ಏಂಜಲೀಸ್‌ನಲ್ಲಿ ಶನಿವಾರ ನಡೆದ ಸೌಂಡ್‌ ರನ್ನಿಂಗ್‌ ಟ್ರ್ಯಾಕ್‌ ಕೂಟದಲ್ಲಿ ಹೊಸ ದಾಖಲೆ ಬರೆದರು. ಅವಿನಾಶ್‌ 13 ನಿ. 19.30 ಸೆ.ಗಳಲ್ಲಿ ಗುರಿ ತಲುಪಿದರಲ್ಲದೆ, ತಮ್ಮದೇ ಹೆಸರಿನಲ್ಲಿದ್ದ ದಾಖಲೆಯನ್ನು ಆರು ಸೆಕೆಂಡುಗಳಿಂದ ಉತ್ತಮಪಡಿಸಿಕೊಂಡರು. 13 ನಿ. 25.65 ಸೆ. ಅವರ ಈ ಹಿಂದಿನ ಶ್ರೇಷ್ಠ ಸಾಧನೆಯಾಗಿತ್ತು. 3,000 ಮೀ. ಸ್ಟೀಪಲ್‌ ಚೇಸ್‌ ಸ್ಪರ್ಧೆಯ ರಾಷ್ಟ್ರೀಯ ದಾಖಲೆ ಕೂಡಾ ಸಬ್ಳೆ ಹೆಸರಿನಲ್ಲಿದೆ. ಮಹಿಳೆಯರ ವಿಭಾಗದಲ್ಲಿ 28 ವರ್ಷದ ಪಾರುಲ್‌ 15 ನಿ. 10.35 ಸೆ.ಗಳಲ್ಲಿ ಗುರಿ ತಲುಪಿದರು. ಪ್ರೀಜಾ ಶ್ರೀಧರನ್‌ 13 ವರ್ಷಗಳ ಹಿಂದೆ ಮಾಡಿದ್ದ ದಾಖಲೆಯನ್ನು ಅವರು ಮುರಿದರು. 2010ರ ಏಷ್ಯನ್‌ ಕ್ರೀಡಾಕೂಟದಲ್ಲಿ ಪ್ರೀಜಾ 15 ನಿ. 15.89 ಸೆ.ಗಳಲ್ಲಿ ಗುರಿ ತಲುಪಿದ್ದು ಇದುವರೆಗಿನ ದಾಖಲೆಯಾಗಿತ್ತು. ‘13 ವರ್ಷಗಳ ಹಿಂದಿನ ರಾಷ್ಟ್ರೀಯ ದಾಖಲೆ ಮುರಿಯಲು ಸಾಧ್ಯವಾಗಿರುವುದು ಸಂತಸದ ವಿಷಯ. ಏಪ್ರಿಲ್‌ನಿಂದಲೂ ಅಮೆರಿಕದಲ್ಲಿ ತರಬೇತಿ ಪಡೆಯುತ್ತಿದ್ದೇನೆ. ಇಲ್ಲಿನ ತರಬೇತಿ ನನ್ನ ಪ್ರದರ್ಶನ ಉತ್ತಮಪಡಿಸಿಕೊಳ್ಳುವ ನಿಟ್ಟಿನಲ್ಲಿ ಹೆಚ್ಚಿನ ನೆರವು ನೀಡಿದೆ’ ಎಂದು ಪಾರುಲ್‌ ಪ್ರತಿಕ್ರಿಯಿಸಿದ್ದಾರೆ. ಪಾರುಲ್‌ ಮತ್ತು ಸಬ್ಳೆ ಅವರು ಇನ್‌ಸ್ಪೈರ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸ್ಪೋರ್ಟ್ಸ್‌ (ಐಐಎಸ್‌) ಪ್ರಾಯೋಜಕತ್ವದಲ್ಲಿ ಅಮೆರಿಕದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.