ಬ್ಯಾಡ್ಮಿಂಟನ್‌: ಶ್ರೀಕಾಂತ್‌, ಅಶ್ಮಿತಾಗೆ ಅಗ್ರಸ್ಥಾನ ಹೈದರಾಬಾದ್‌ (ಪಿಟಿಐ): ಕಿದಂಬಿ ಶ್ರೀಕಾಂತ್‌ ಮತ್ತು ಅಶ್ಮಿತಾ ಚಲಿಹಾ ಅವರು ಮುಂಬರುವ ಏಷ್ಯನ್‌ ಕ್ರೀಡಾಕೂಟಕ್ಕೆ ಭಾರತ ತಂಡದ ಆಯ್ಕೆಗಾಗಿ ಭಾರತ ಬ್ಯಾಡ್ಮಿಂಟನ್‌ ಸಂಸ್ಥೆ (ಬಿಎಐ) ಆಯೋಜಿಸಿದ್ದ ಟ್ರಯಲ್ಸ್‌ನಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ವಿಭಾಗಗಳಲ್ಲಿ ಅಗ್ರಸ್ಥಾನ ಪಡೆದುಕೊಂಡರು. ಶ್ರೀಕಾಂತ್‌ ಮತ್ತು ಅಶ್ಮಿತಾ ಅವರು ನಾಲ್ಕು ದಿನ ನಡೆದ ಟ್ರಯಲ್ಸ್‌ನಲ್ಲಿ ತಾವಾಡಿದ ಆರೂ ಪಂದ್ಯಗಳನ್ನು ಗೆದ್ದು ಅಜೇಯ ಸಾಧನೆ ಮಾಡಿದರು. ಭಾನುವಾರ ನಡೆದ ಪಂದ್ಯದಲ್ಲಿ ಶ್ರೀಕಾಂತ್‌ 21–13, 21–16 ರಲ್ಲಿ ಸಿದ್ಧಾರ್ಥ್‌ ಗುಪ್ತಾ ವಿರುದ್ಧವೂ, 21–15, 21–14 ರಲ್ಲಿ ಲಕ್ಷ್ಯ ಸೇನ್‌ ವಿರುದ್ಧವೂ ಗೆದ್ದರು. ಶನಿವಾರ ನಡೆದಿದ್ದ ಪಂದ್ಯದಲ್ಲಿ ಅವರು 22-24, 21-13, 21-14 ರಲ್ಲಿ ಮಿಥುನ್‌ ಮಂಜುನಾಥ್‌ ಅವರನ್ನು ಮಣಿಸಿದ್ದರು. ಒಂದು ಪಂದ್ಯವನ್ನು ಸೋತ ಲಕ್ಷ್ಯ ಸೇನ್‌ ಟ್ರಯಲ್ಸ್‌ನಲ್ಲಿ ಎರಡನೇ ಸ್ಥಾನ ಪಡೆದರೆ, ಎರಡು ಪಂದ್ಯಗಳನ್ನು ಸೋತ ಮಿಥುನ್‌ ಮೂರನೇ ಸ್ಥಾನ ಗಳಿಸಿದರು. ಮಹಿಳೆಯರ ವಿಭಾಗದಲ್ಲಿ ಅಶ್ಮಿತಾ ಮತ್ತು ಅನುಪಮಾ ಉಪಾಧ್ಯಾಯ ಅವರು ಕ್ರಮವಾಗಿ ಮೊದಲ ಎರಡು ಸ್ಥಾನಗಳನ್ನು ಪಡೆದುಕೊಂಡರು. ಮಾಳವಿಕಾ ಬನ್ಸೊದ್‌ ಮೂರನೇ ಹಾಗೂ ಉನ್ನತಿ ಹೂಡಾ ನಾಲ್ಕನೇ ಸ್ಥಾನ ಗಳಿಸಿದರು. ಟ್ರಯಲ್ಸ್‌ನಲ್ಲಿ ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಒಂಬತ್ತು ಹಾಗೂ ಮಹಿಳೆಯರ ಸಿಂಗಲ್ಸ್‌ ವಿಭಾಗದಲ್ಲಿ ಎಂಟು ಮಂದಿ ಕಣಕ್ಕಿಳಿದಿದ್ದರು. ಪ್ರತಿ ವಿಭಾಗದಲ್ಲಿ ತಲಾ ಮೂವರು ತಂಡಕ್ಕೆ ಆಯ್ಕೆಯಾಗಲಿದ್ದಾರೆ. ಅಗ್ರಮಾನ್ಯ ಆಟಗಾರ ಎಚ್‌.ಎಸ್‌.ಪ್ರಣಯ್‌, ಮಾಜಿ ವಿಶ್ವ ಚಾಂಪಿಯನ್‌ ಪಿ.ವಿ.ಸಿಂಧು, ಏಷ್ಯನ್‌ ಚಾಂಪಿಯನ್ನರಾದ ಚಿರಾಗ್‌ ಶೆಟ್ಟಿ– ಸಾತ್ವಿಕ್‌ಸಾಯಿರಾಜ್‌ ರಣಕಿರೆಡ್ಡಿ, ಮಹಿಳಾ ಡಬಲ್ಸ್‌ ಆಟಗಾರ್ತಿಯರಾದ ಗಾಯತ್ರಿ ಗೋಪಿಚಂದ್‌ ಮತ್ತು ತ್ರಿಷಾ ಜೋಲಿ ಅವರು ವಿಶ್ವ ರ್‍ಯಾಂಕಿಂಗ್‌ನ ಆಧಾರದಲ್ಲಿ ಏಷ್ಯನ್‌ ಕ್ರೀಡಾಕೂಟದ ತಂಡಕ್ಕೆ ನೇರವಾಗಿ ಆಯ್ಕೆಯಾಗಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.