ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌: ಕ್ವಾರ್ಟರ್‌ಫೈನಲ್‌ಗೆ ಹುಸಾಮುದ್ದೀನ್‌ ತಾಷ್ಕೆಂಟ್‌, ಉಜ್ಬೆಕಿಸ್ತಾನ (ಪಿಟಿಐ): ಅಮೋಘ ಸಾಮರ್ಥ್ಯ ಮುಂದುವರಿಸಿದ ಮೊಹಮ್ಮದ್ ಹುಸಾಮುದ್ದೀನ್ ಅವರು ಪುರುಷರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನ ಕ್ವಾರ್ಟರ್‌ಫೈನಲ್‌ ತಲುಪಿದ್ದಾರೆ. ಇಲ್ಲಿ ನಡೆಯುತ್ತಿರುವ ಚಾಂಪಿಯನ್‌ಷಿಪ್‌ನ 57 ಕೆಜಿ ವಿಭಾಗದ 16ರ ಘಟ್ಟದ ಬೌಟ್‌ನಲ್ಲಿ ಭಾನುವಾರ ಹುಸಾಮುದ್ದೀನ್‌ 5–0ಯಿಂದ ರಷ್ಯಾದ ಸವಿನ್ ಎಡ್ವರ್ಡ್‌ ಸವಾಲು ಮೀರಿದರು. ಸ್ಪರ್ಧೆಯ ಆರಂಭದಿಂದಲೂ ಪಾರಮ್ಯ ಮೆರೆದ ಭಾರತದ ಬಾಕ್ಸರ್‌, ಯಾವುದೇ ಹಂತದಲ್ಲೂ ಎದುರಾಳಿ ಚೇತರಿಸಿಕೊಳ್ಳಲು ಅವಕಾಶ ಮಾಡಿಕೊಡಲಿಲ್ಲ. ಎರಡು ಮತ್ತು ಮೂರನೇ ಸುತ್ತುಗಳಲ್ಲಿ ಜಾಣತನ ಮತ್ತು ಚುರುಕಿನ ಪಂಚ್‌ಗಳಿಂದ ಹುಸಾಮುದ್ದೀನ್‌, ರಷ್ಯಾ ಸ್ಪರ್ಧಿಯನ್ನು ಕಂಗೆಡಿಸಿದರು. ಗೆಲುವು ಒಲಿಸಿಕೊಂಡರು. ಎಂಟರಘಟ್ಟದ ಬೌಟ್‌ನಲ್ಲಿ ಹುಸಾಮುದ್ದೀನ್ ಅವರಿಗೆ ಬಲ್ಗೇರಿಯಾದ ಜೇವಿಯರ್ ಇಬನೆಜ್ ಸವಾಲು ಎದುರಾಗಿದೆ. ಸಕೆನ್‌ಗೆ ಆಘಾತ ನೀಡಿದ ದೀಪಕ್‌: 51 ಕೆಜಿ ವಿಭಾಗದ ಸ್ಪರ್ಧಿ ದೀಪಕ್ ಬೋರಿಯಾ ಪ್ರೀಕ್ವಾರ್ಟರ್‌ಫೈನಲ್‌ಗೆ ಮುನ್ನಡೆದರು. ಭಾನುವಾರ ನಡೆದ ಎರಡನೇ ಸುತ್ತಿನ ಬೌಟ್‌ನಲ್ಲಿ ಭಾರತದ ಬಾಕ್ಸರ್ 5–2ರಿಂದ, ಒಲಿಂಪಿಕ್‌ ಕಂಚಿನ ಪದಕ ವಿಜೇತ, ಕಜಕಸ್ತಾನದ ಸಕೆನ್‌ ಬಿಬೊಸಿನೊವ್‌ ಅವರಿಗೆ ಸೋಲುಣಿಸಿದರು. ಸಕೆನ್‌ ಅವರು 2021ರ ವಿಶ್ವ ಚಾಂಪಿಯನ್‌ ಕೂಡ ಆಗಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.