ಕೊಕ್ಕೊ ಟೂರ್ನಿ: ಮಂಗಳೂರು ವಿವಿಗೆ ಚಾಂಪಿಯನ್ ಪಟ್ಟ ಬೆಂಗಳೂರು: ಆಲ್‌ರೌಂಡ್ ಆಟದ ಮೂಲಕ ಆಳ್ವಾಸ್ ಕಾಲೇಜಿನ ಮಹೇಶ್ ಪಿ ಮಿಂಚಿದರು. ಡಿಫೆಂಡರ್ ಮರೆಪ್ಪ ಮತ್ತು ಚೇಸರ್ ದೀಕ್ಷಿತ್ ಅವರೂ ಅಮೋಘ ಆಟ ಪ್ರದರ್ಶಿಸಿದರು. ಇದರ ಫಲವಾಗಿ ಮಂಗಳೂರು ವಿಶ್ವವಿದ್ಯಾಲಯ ತಂಡ ದಕ್ಷಿಣ ವಲಯ ಅಂತರ ವಿವಿ ಕೊಕ್ಕೊ ಟೂರ್ನಿಯ ಚಾಂಪಿಯನ್ ಪಟ್ಟ ತನ್ನದಾಗಿಸಿಕೊಂಡಿತು. ಕ್ರೈಸ್ಟ್ ಕಾಲೇಜು ಹಾಗೂ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಜಂಟಿ ಆಶ್ರಯದಲ್ಲಿ ನಡೆದ ಟೂರ್ನಿಯ ಕೊನೆಯ ಸೂಪರ್ ಲೀಗ್ ಹಣಾಹಣಿಯಲ್ಲಿ ಮಂಗಳೂರು ವಿವಿ ಕೇರಳದ ಕ್ಯಾಲಿಕಟ್ ವಿವಿಯನ್ನು 14–11ರಲ್ಲಿ ಮಣಿಸಿತು. ಮೊದಲ ಇನಿಂಗ್ಸ್‌ನಲ್ಲಿ ಮಂಗಳೂರು ವಿವಿ ಏಳು ಪಾಯಿಂಟ್ ಗಳಿಸಿದರೆ ಎದುರಾಳಿ ತಂಡಕ್ಕೆ ಐದು ಪಾಯಿಂಟ್ ಗಳಿಸಲಷ್ಟೇ ಸಾಧ್ಯವಾಯಿತು. ಎರಡನೇ ಇನಿಂಗ್ಸ್‌ನಲ್ಲಿ ಕೂಡ ಮಂಗಳೂರು ಏಳು ಪಾಯಿಂಟ್ಸ್ ಕಲೆ ಹಾಕಿತು. ಕ್ಯಾಲಿಕಟ್‌ ತಂಡ ಪ್ರಬಲ ಪೈಪೋಟಿ ಒಡ್ಡಿತು. ಆದರೆ ಮಂಗಳೂರು ತಂಡ ಆರು ಪಾಯಿಂಟ್‌ಗಳನ್ನು ಮಾತ್ರ ಬಿಟ್ಟುಕೊಟ್ಟಿತು. ಪಂದ್ಯದುದ್ದಕ್ಕೂ ಮಿಂಚಿನ ಆಟವಾಡಿದ ಮಹೇಶ್ ಮೂರು ಔಟ್ ಮಾಡಿದರು. ಮೊದಲ ಇನಿಂಗ್ಸ್‌ನಲ್ಲಿ ಎರಡು ನಿಮಿಷ ಮತ್ತು ಎರಡನೇ ಇನಿಂಗ್ಸ್‌ನಲ್ಲಿ ಎರಡೂವರೆ ನಿಮಿಷ ರಕ್ಷಣಾತ್ಮಕ ಆಟವಾಡಿದರು. ಕ್ವಾರ್ಟರ್ ಫೈನಲ್ ಪಂದ್ಯಗಳಲ್ಲಿ ಜಯ ಗಳಿಸಿದ ಮಂಗಳೂರು, ಕ್ಯಾಲಿಕಟ್‌, ಕುವೆಂಪು ಮತ್ತು ದಾವಣಗೆರೆ ವಿವಿ ತಂಡಗಳು ಸೂಪರ್ ಲೀಗ್ ಹಣಾಹಣಿಗೆ ಅರ್ಹತೆ ಪಡೆದುಕೊಂಡಿದ್ದವು. ಈ ಹಂತದಲ್ಲಿ ಮೂರು ಪಂದ್ಯ ಗೆದ್ದ ಮಂಗಳೂರು ಚಾಂಪಿಯನ್ ಆದರೆ ಎರಡು ಪಂದ್ಯ ಗೆದ್ದ ಕ್ಯಾಲಿಕಟ್ ರನ್ನರ್ ಅಪ್‌ ಆಯಿತು. ಒಂದು ಪಂದ್ಯ ಗೆದ್ದ ಕುವೆಂಪು ವಿವಿ ಮೂರನೇ ಸ್ಥಾನ ಗಳಿಸಿತು. ಈ ನಾಲ್ಕೂ ತಂಡಗಳು ಅಖಿಲ ಭಾರತ ಮಟ್ಟದ ಟೂರ್ನಿಗೆ ಅರ್ಹತೆ ಪಡೆದುಕೊಂಡಿವೆ. ಮಹೇಶ್ ಪಿ ಟೂರ್ನಿಯ ಉತ್ತಮ ಆಲ್‌ರೌಂಡರ್ ಆಗಿ ಹೊರಹೊಮ್ಮಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.