ಬ್ಯಾಡ್ಮಿಂಟನ್ ಟೂರ್ನಿ | ಶ್ರೀಕಾಂತ್ ಜಯಭೇರಿ; ಸಿಂಧುಗೆ ನಿರಾಸೆ ಮುಲ್ಹಮ್ ಆ್ಯನ್‌ ಡರ್ ರುಹ್ರ್‌, ಜರ್ಮನಿ: ಒಲಿಂಪಿಕ್ಸ್‌ನಲ್ಲಿ ಎರಡು ಪದಕ ಗೆದ್ದಿರುವ, ಮಾಜಿ ವಿಶ್ವ ಚಾಂಪಿಯನ್ ಭಾರತದ ಪಿ.ವಿ.ಸಿಂಧು ಅವರು ಜರ್ಮನ್ ಓಪನ್ ಸೂಪರ್ 300 ಬ್ಯಾಡ್ಮಿಂಟನ್ ಟೂರ್ನಿಯ ಎರಡನೇ ಸುತ್ತಿನಲ್ಲೇ ಸೋತು ಹೊರಬಿದ್ದಿದ್ದಾರೆ. ಕಿದಂಬಿ ಶ್ರೀಕಾಂತ್ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಗುರುವಾರ ನಡೆದ ಪಂದ್ಯದಲ್ಲಿ ಚೀನಾದ ಜಾಂಗ್‌ ಯಿ ಮಾನ್ 21–14, 15–21, 21–14ರಲ್ಲಿ ಸಿಂಧು ವಿರುದ್ಧ ಜಯ ಸಾಧಿಸಿದರು. 55 ನಿಮಿಷಗಳ ಹಣಾಹಣಿಯ ಎರಡನೇ ಗೇಮ್‌ನಲ್ಲಿ ಮಾತ್ರ ಸಿಂಧು ಅವರು ಸ್ವಲ್ಪ ಪ್ರತಿರೋಧ ಒಡ್ಡಿದರು. ಎಂಟನೇ ಶ್ರೇಯಾಂಕದ ಶ್ರೀಕಾಂತ್‌21-16, 21-23, 21-18ರಲ್ಲಿ ಚೀನಾದ ಲು ಗ್ವಾಂಗ್ ಜು ವಿರುದ್ಧ ಗೆಲುವು ಸಾಧಿಸಿದರು. ಈ ಪಂದ್ಯ ಒಟ್ಟು ಒಂದು ತಾಸು ಏಳು ನಿಮಿಷ ನಡೆಯಿತು. ಜಾಂಗ್ ಎದುರಿನ ಪಂದ್ಯದ ಆರಂಭದಲ್ಲಿ ಸಿಂಧು 5–5ರ ಸಮಬಲ ಸಾಧಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ ಜಾಂಗ್ ಸತತ ಆರು ಪಾಯಿಂಟ್ ಗಳಿಸಿ 11–6ರಲ್ಲಿ ಮುನ್ನಡೆದರು. ನಂತರ ನಿರಾಯಾಸವಾಗಿ ಮೊದಲ ಗೇಮ್‌ ತಮ್ಮದಾಗಿಸಿಕೊಂಡರು. ಎರಡನೇ ಗೇಮ್‌ನ ವಿರಾಮದ ವೇಳೆ 11–10ರ ಮುನ್ನಡೆಯಲ್ಲಿದ್ದ ಸಿಂಧು ನಂತರ ಅಮೋಘ ಓಟದ ಮೂಲಕ ಜಯ ಸಾಧಿಸ ಭರವಸೆ ಮೂಡಿಸಿದರು. ಆದರೆ ನಿರ್ಣಾಯಕ ಗೇಮ್‌ನಲ್ಲಿ ಎದುರಾಳಿ ಆಟಗಾರ್ತಿ ತಿರುಗೇಟು ನೀಡಿದರು. ಆರಂಭದಲ್ಲಿ 11–8ರ ಮುನ್ನಡೆ ಗಳಿಸಿದ ಅವರು ನಂತರ ಮೊದಲ ಗೇಮ್‌ನಂತೆಯೇ ಆಧಿಪತ್ಯ ಮುಂದುವರಿಸಿ ಜಯಭೇರಿ ಮೊಳಗಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.