ಎಫ್‌ಐಎಚ್‌ ಮಹಿಳೆಯರ ಪ್ರೊ ಹಾಕಿ ಲೀಗ್‌: ಜರ್ಮನಿ ವಿರುದ್ಧ ಸೇಡು ತೀರಿಸಿಕೊಂಡ ಭಾರತ ಭುವನೇಶ್ವರ: ಮೊದಲ ಲೆಗ್‌ನಲ್ಲಿ ಸೋಲಿಗೆ ಶರಣಾಗಿದ್ದ ಭಾರತ ತಂಡ ಎಫ್‌ಐಎಚ್‌ ಪ್ರೊ ಲೀಗ್ ಮಹಿಳೆಯರ ಹಾಕಿ ಟೂರ್ನಿಯ ಎರಡನೇ ಲೆಗ್‌ನ ಪಂದ್ಯದಲ್ಲಿ ಜರ್ಮನಿ ವಿರುದ್ಧ ಸೇಡು ತೀರಿಸಿಕೊಂಡಿತು. ಕಳಿಂಗ ಕ್ರೀಡಾಂಗಣದಲ್ಲಿ ಭಾನುವಾರ ಸಂಜೆ ನಡೆದ ಪಂದ್ಯದ ಶೂಟೌಟ್‌ನಲ್ಲಿ ಭಾರತ 3–0ಯಿಂದ ಜಯ ಗಳಿಸಿತು. ನಿಗದಿತ ಅವಧಿಯಲ್ಲಿ ಎರಡೂ ತಂಡಗಳು ತಲಾ ಒಂದೊಂದು ಗೋಲು ಗಳಿಸಿದ್ದವು. ಶನಿವಾರ ನಡೆದ ಮೊದಲ ಲೆಗ್ ಪಂದ್ಯವೂ ಇದೇ ರೀತಿ ಮುಕ್ತಾಯ ಕಂಡಿತ್ತು. ಜರ್ಮನಿ 2–1ರಲ್ಲಿ ಗೆದ್ದಿತ್ತು. ಭಾನುವಾರದ ಶೂಟೌಟ್‌ನಲ್ಲಿ ಭಾರತದ ಆಟಗಾರ್ತಿಯರು ಮೊದಲ ಮೂರೂ ಅವಕಾಶಗಳಲ್ಲಿ ಯಶಸ್ಸು ಸಾಧಿಸಿದರು. ಜರ್ಮನಿಯ ಯಾರಿಗೂ ಗುರಿ ಮುಟ್ಟಲು ಆಗಲಿಲ್ಲ. ಭಾರತದ ಪರ ಸಂಗೀತಾ ಕುಮಾರಿ, ಸಲೀಮಾ ಟೆಟೆ ಮತ್ತು ಸೋನಿಕಾ ಗೋಲು ಗಳಿಸಿದರು. ಜರ್ಮನಿ ಪರವಾಗಿ ಲಿಲಿ ಸ್ಟೆಫಲ್ಸ್‌ಮಾ, ಲೀನಾ ಫ್ರೆಂಚ್ಸ್‌ ಮತ್ತು ಸಾರಾ ಸ್ಟ್ರಾಸ್ ಅವರ ಪ್ರಯತ್ನಗಳನ್ನು ನಾಯಕಿ ಮತ್ತು ಗೋಲ್‌ಕೀಪರ್ ಸವಿತಾ ಪೂನಿಯಾ ವಿಫಲಗೊಳಿಸಿದರು. ವಿಶ್ವ ಕ್ರಮಾಂಕದಲ್ಲಿ ಐದನೇ ಸ್ಥಾನದಲ್ಲಿರುವ ಜರ್ಮನಿ ಪಂದ್ಯದ ಆರಂಭದಲ್ಲಿ ಆಕ್ರಮಣಕ್ಕೆ ಮುಂದಾಯಿತು. ಇದರ ಫಲವಾಗಿ 29ನೇ ನಿಮಿಷದಲ್ಲಿ ಅದಕ್ಕೆ ಪೆನಾಲ್ಟಿ ಅವಕಾಶ ಲಭಿಸಿತು. ಫೆಲಿಸಿಯಾ ವೀಡರ್‌ಮ್ಯಾನ್ ಗೋಲು ಗಳಿಸಿದರು. 40ನೇ ನಿಮಿಷದಲ್ಲಿ ಮೋಹಕ ಫೀಲ್ಡ್‌ ಗೋಲ್‌ ಮೂಲಕ ಭಾರತಕ್ಕೆ ನಿಶಾ ಸಮಬಲ ಗಳಿಸಿಕೊಟ್ಟರು. ವಿಶ್ವ ಕ್ರಮಾಂಕದಲ್ಲಿ ಒಂಬತ್ತನೇ ಸ್ಥಾನದಲ್ಲಿರುವ ಭಾರತ ಈ ಗೆಲುವಿನೊಂದಿಗೆ ಎರಡು ಪಾಯಿಂಟ್ ಗಲಿಸಿತು. ಜರ್ಮನಿಗೆ ಒಂದು ಪಾಯಿಂಟ್ ಲಭಿಸಿತು. ಏಪ್ರಿಲ್ ಎರಡು ಮತ್ತು ಮೂರರಂದು ಭಾರತ ಮಹಿಳೆಯರು ಇಂಗ್ಲೆಂಡ್ ವಿರುದ್ಧ ಸೆಣಸುವರು. ಇದೇ ಅಂಗಣದಲ್ಲಿ ಪಂದ್ಯಗಳು ನಡೆಯಲಿವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.