ಗ್ರ್ಯಾನ್ ಪ್ರಿ: ಮಾರ್ಕ್‌ ಮಾರ್ಕ್ವೆಜ್‌ಗೆ ಗಾಯ ಕುತಾ ಮಾಂಡಲಿಕ, ಇಂಡೊನೇಷ್ಯ: ಆರು ಬಾರಿಯ ಮೋಟೊ ಜಿಪಿ ವಿಶ್ವ ಚಾಂಪಿಯನ್ ಸ್ಪೇನ್‌ನ ಮಾರ್ಕ್ ಮಾರ್ಕ್ವೆಜ್ ಅವರು ಇಂಡೊನೇಷ್ಯಾ ಗ್ರ್ಯಾನ್ ಪ್ರಿ ಮೋಟರ್ ರೇಸ್‌ನ ಅಭ್ಯಾಸದ ವೇಳೆ ಬಿದ್ದು ಗಾಯಗೊಂಡರು. ಶುಕ್ರವಾರ ನಡೆದ ಎರಡನೇ ಅಭ್ಯಾಸದ ಸಂದರ್ಭದಲ್ಲಿ ವೇಗವಾಗಿ ಮುನ್ನುಗ್ಗಿದ ಅವರು ಟ್ರ್ಯಾಕ್‌ನಲ್ಲೇ ಬಿದ್ದರು. ಹಾಲಿ ಚಾಂಪಿಯನ್ ಫ್ರಾನ್ಸ್‌ನ ಫ್ಯಾಬಿಯೊ ಕ್ವಾರ್ಟರರೊ ವೇಗದ ಚಾಲಕ ಎನಿಸಿಕೊಂಡರು. ಟೈಮ್‌ಶೀಟ್‌ನಲ್ಲಿ ಮಾರ್ಕ್ವೆಜ್ 22ನೇ ಸ್ಥಾನಕ್ಕೆ ಕುಸಿದರು. ಇಂಡೊನೇಷ್ಯಾದಲ್ಲಿ 25 ವರ್ಷಗಳ ನಂತರ ಇದೇ ಮೊದಲು ವಿಶ್ವದರ್ಜೆಯ ಮೋಟರ್ ಸೈಕಲ್ ರೇಸ್‌ಗೆ ವೇದಿಕೆ ಸಿದ್ಧವಾಗಿದೆ. ದ್ವೀಪಪ್ರದೇಶವಾದ ಲಾಂಬೋಕ್‌ನ ಮಾಂಡಲಿಕ ಸರ್ಕೀಟ್‌ನಲ್ಲಿ ಶುಕ್ರವಾರ ಮಧ್ಯಾಹ್ನ ಬಿಸಿಲಿನ ಬೇಗೆಯಲ್ಲಿ ನಡೆದ ರೇಸ್‌ ನಾಟಕೀಯ ಬೆಳವಣಿಗೆಗೆ ಸಾಕ್ಷಿಯಾಯಿತು. ಮಾರ್ಕ್ವೆಜ್ 11ನೇ ತಿರುವಿನತ್ತ ತಲುಪುತ್ತಿದ್ದಂತೆ ನೆಲಕ್ಕೆ ಬಿದ್ದರು. ತಕ್ಷಣ ಎದ್ದು ಸ್ಪರ್ಧೆ ಮುಂದುವರಿಸಿದರು. ದಿನದ ಕೊನೆಯ ರೇಸ್‌ನಲ್ಲಿ ಉತ್ಸಾಹದಿಂದ ಪಾಲ್ಗೊಂಡ ಅವರು ಗಮನಾರ್ಹ ಸಾಧನೆ ಮಾಡಿದರು. ಶನಿವಾರ ನಡೆಯಲಿರುವ ಅರ್ಹತಾ ಸುತ್ತಿನ ಸ್ಪರ್ಧೆಗಳಲ್ಲಿ ಮತ್ತು ಭಾನುವಾರ ನಡೆಯಲಿರುವ ಸ್ಪರ್ಧೆಯಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ. ಆದರೆ ಈ ಎರಡೂ ದಿನ ಗುಡುಗು ಸಿಡಿಲಿನಿಂದೊಡಗೂಡಿದ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.