ಬಾಕ್ಸಿಂಗ್: 39 ಪದಕ ಜಯಿಸಿದ ಭಾರತ ನವದೆಹಲಿ: ವಿಶ್ವನಾಥ್ ಸುರೇಶ್‌ ಮತ್ತು ವಂಶಜ್‌ ಅವರು ಚಿನ್ನದ ಪದಕಗಳಿಗೆ ಮುತ್ತಿಟ್ಟರು. ಇದರೊಂದಿಗೆ ಏಷ್ಯನ್‌ ಯೂತ್ ಮತ್ತು ಜೂನಿಯರ್ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ಅನ್ನು ಭಾರತ ತಂಡವು ಅಮೋಘ 39 ಪದಕಗಳೊಂದಿಗೆ ಕೊನೆಗೊಳಿಸಿತು. ಜೋರ್ಡಾನ್‌ನ ಅಮ್ಮಾನ್‌ನಲ್ಲಿ ನಡೆದ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಬಾಕ್ಸರ್‌ಗಳಿಗೆ 15 ಚಿನ್ನ, 10 ಬೆಳ್ಳಿ ಮತ್ತು 14 ಕಂಚಿನ ಪದಕಗಳು ಒಲಿದವು. ಯೂತ್ ವಿಭಾಗದಲ್ಲಿ ಏಳು ಚಿನ್ನ, ಮೂರು ಬೆಳ್ಳಿ ಮತ್ತು ಎಂಟು ಕಂಚು ಭಾರತದ ಪಾಲಾದರೆ, ಜೂನಿಯರ್ ವಿಭಾಗದಲ್ಲಿ ಎಂಟು ಚಿನ್ನ, ಏಳು ಬೆಳ್ಳಿ ಮತ್ತು ಆರು ಕಂಚಿನ ಪದಕಗಳು ಮುಡಿ ಸೇರಿದವು. ಪುರುಷರ ಯೂತ್ ವಿಭಾಗದ 48 ಕೆಜಿ ವಿಭಾಗದಲ್ಲಿ ವಿಶ್ವನಾಥ್‌ ಮತ್ತು 63.5 ಕೆಜಿ ವಿಭಾಗದಲ್ಲಿ ವಂಶಜ್‌ ಚಾಂಪಿಯನ್‌ ಆಗಿ ಹೊರಹೊಮ್ಮಿದರು. ಚೆನ್ನೈನ ವಿಶ್ವನಾಥ್‌ ಅವರು ಸೋಮವಾರ ರಾತ್ರಿ ನಡೆದ ಫೈನಲ್ ಬೌಟ್‌ನಲ್ಲಿ 5–0ಯಿಂದ ಕಿರ್ಗಿಸ್ತಾನದ ಎರ್ಗೆಶೋವ್‌ ಬೆಕ್ಜತ್ ಅವರನ್ನು ಪರಾಭವಗೊಳಿಸಿದರು. ವಂಶಜ್ ಅವರು ಚಿನ್ನದ ಪದಕ ಸುತ್ತಿನಲ್ಲಿ 4–1ರಿಂದ ಉಜ್ಬೆಕಿಸ್ತಾನದ ಜಾವೊಕಿರ್‌ ಉಮ್ಮತಾಲಿಯೆವ್‌ ಎದುರು ಗೆದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.