ನಾಲ್ಕರ ಘಟ್ಟಕ್ಕೆ ಮೋನಿಕಾ, ಮನೀಷಾ ನವದೆಹಲಿ: ಎರಡು ಬಾರಿಯ ವಿಶ್ವಚಾಂಪಿಯನ್‌ಷಿಪ್‌ ಪದಕ ವಿಜೇತ ಜಾಸಿ ಗ್ಯಾಬುಕೊ ಅವರಿಗೆ ಆಘಾತ ನೀಡಿದ ಭಾರತದ ಮೋನಿಕಾ ಅವರು ಥಾಯ್ಲೆಂಡ್‌ ಓಪನ್ ಬಾಕ್ಸಿಂಗ್ ಟೂರ್ನಿಯ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಥಾಯ್ಲೆಂಡ್‌ನ ಫುಕೆಟ್‌ನಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಆಶಿಶ್‌ ಕುಮಾರ್‌ (81 ಕೆಜಿ ವಿಭಾಗ) ಹಾಗೂ ಮನೀಷಾ (ಮಹಿಳೆಯರ 57 ಕೆಜಿ ವಿಭಾಗ) ಕೂಡ ನಾಲ್ಕರ ಘಟ್ಟ ಪ್ರವೇಶಿಸಿದರು. ಮಹಿಳೆಯರ 48 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿರುವ 26 ವರ್ಷದ ಮೋನಿಕಾ 4–1ರಿಂದ ಗ್ಯಾಬುಕಾ ಅವರನ್ನು ಮಣಿಸಿದರು. ಫಿಲಿಪ್ಪೀನ್ಸ್‌ನ ಗ್ಯಾಬುಕಾ 2012 ಮತ್ತು 2008ರ ವಿಶ್ವ ಚಾಂಪಿಯನ್‌ಷಿಪ್‌ಗಳಲ್ಲಿ ಕ್ರಮವಾಗಿ ಚಿನ್ನ ಮತ್ತು ಕಂಚಿನ ಪದಕಗಳನ್ನು ಮುಡಿಗೇರಿಸಿಕೊಂಡಿದ್ದರು. ಸೆಮಿಫೈನಲ್‌ನಲ್ಲಿ ಮೋನಿಕಾ ಅವರು ವಿಯೆಟ್ನಾಂನ ತ್ರಿನ್‌ ಥಿ ಡಿಯೆಮ್‌ ಕೀವ್ ಅವರನ್ನು ಎದುರಿಸಲಿದ್ದಾರೆ. ಟೋಕಿಯೊ ಒಲಿಂಪಿಕ್ಸ್‌ ಬಳಿಕ ಮೊದಲ ಬಾರಿ ಕಣಕ್ಕಿದಿರುವ ಆಶಿಶ್‌ ಕ್ವಾರ್ಟರ್‌ಫೈನಲ್ ಬೌಟ್‌ನಲ್ಲಿ 5–0ಯಿಂದ ಥಾಯ್ಲೆಂಡ್‌ ಬಾಕ್ಸರ್‌ ಆ್ಯಫಿಸಿಟ್‌ ಖಂಖೊಕ್ರೆವಾ ಅವರನ್ನು ಪರಾಭವಗೊಳಿಸಿದರು. ನಾಲ್ಕರಘಟ್ಟದಲ್ಲಿ ಆಶಿಶ್‌ ಇಂಡೊನೇಷ್ಯಾದ ಮೈಕೆಲ್‌ ರಾಬರ್ಟ್‌ ಮುಸ್ಕಿತಾ ಅವರನ್ನು ಎದುರಿಸುವರು. ಇತ್ತೀಚೆಗೆ ವಿಶ್ವ ಚಾಂಪಿಯನ್‌ಷಿಪ್ ಮತ್ತು ಏಷ್ಯನ್ ಗೇಮ್ಸ್‌ಗೆ ಅರ್ಹತೆ ಗಳಿಸಿರುವ ಮನೀಷಾ ಅವರು ಎಂಟರಘಟ್ಟದಲ್ಲಿ 3–2ರಿಂದ ಥಾಯ್ಲೆಂಡ್‌ನ ಪಾರ್ನ್‌ಟಿಪ್‌ ಬುವಾಪ ಅವರನ್ನು ಸೋಲಿಸಿದರು. 54 ಕೆಜಿ ವಿಭಾಗದಲ್ಲಿ ರೇಣು ಮತ್ತು 63 ಕೆಜಿ ವಿಭಾಗದಲ್ಲಿ ಮೋನಿಕಾ ಅವರು ಮೊದಲ ಸುತ್ತುಗಳಲ್ಲೇ ನಿರಾಸೆ ಅನುಭವಿಸಿದರು. ಟೂರ್ನಿಯಲ್ಲಿ ವಿವಿಧ ದೇಶಗಳ 130 ಮಂದಿ ಬಾಕ್ಸರ್‌ಗಳು ಪಾಲ್ಗೊಂಡಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.