ಎಂಟರಘಟ್ಟಕ್ಕೆ ದೀಪಕ್‌, ನಿಶಾಂತ್‌ ತಾಷ್ಕೆಂಟ್‌, ಉಜ್ಬೆಕಿಸ್ತಾನ (ಪಿಟಿಐ): ಗೆಲುವಿನ ಓಟ ಮುಂದುವರಿಸಿದ ಭಾರತದ ದೀಪಕ್ ಭೋರಿಯಾ ಹಾಗೂ ನಿಶಾಂತ್ ದೇವ್ ಅವರು ಪುರುಷರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಮಂಗಳವಾರ ಕ್ವಾರ್ಟರ್‌ಫೈನಲ್‌ ಪ್ರವೇಶಿಸಿದರು. ಇಲ್ಲಿ ನಡೆಯುತ್ತಿರುವ ಚಾಂಪಿಯನ್‌ಷಿಪ್‌ನ 51 ಕೆಜಿ ವಿಭಾಗದ 16ರ ಘಟ್ಟದ ಬೌಟ್‌ನಲ್ಲಿ ದೀಪಕ್‌ 5–0ಯಿಂದ ಚೀನಾದ ಜಾಂಗ್‌ ಜಿಯಮಾವೊ ಅವರನ್ನು ಪರಾಭವಗೊಳಿಸಿದರು. ಅಮೋಘ ಸಾಮರ್ಥ್ಯ ತೋರಿದ ದೀಪಕ್‌ ಈ ಬೌಟ್‌ನಲ್ಲಿ ಸಂಪೂರ್ಣ ಪಾರಮ್ಯ ಮೆರೆದರು. ಮೊದಲ ಸುತ್ತಿನಲ್ಲಿ ಇಬ್ಬರು ಸಮಬಲದ ಪೈಪೋಟಿ ನಡೆಸಿದರು. ಸುತ್ತಿನ ಕೊನೆಯಲ್ಲಿ ಭಾರತದ ಬಾಕ್ಸರ್‌ 3–2ರ ಮುನ್ನಡೆ ಪಡೆಯುವಲ್ಲಿ ಯಶಸ್ವಿಯಾದರು. ಬಳಿಕದ ಆರು ನಿಮಿಷಗಳಲ್ಲಿ ದೀಪಕ್ ಅವರು ಚುರುಕಿನ ಪಾದಚಲನೆ ಹಾಗೂ ಪಂಚ್‌ಗಳನ್ನು ಪ್ರಯೋಗಿಸಿ ಸ್ಪರ್ಧೆಯ ತೀವ್ರತೆ ಹೆಚ್ಚಿಸಿದರು. ಅಲ್ಲದೆ ಎದುರಾಳಿಯ ದಾಳಿಯಿಂದ ಅನಾಯಾಸವಾಗಿ ತಪ್ಪಿಸಿಕೊಂಡರು. ನಿಶಾಂತ್‌ (71 ಕೆಜಿ) ಪ್ರೀಕ್ವಾರ್ಟರ್‌ಫೈನಲ್‌ ಬೌಟ್‌ನಲ್ಲಿ ಆರ್‌ಎಸ್‌ಸಿ (ರೆಫರಿಯಿಂದ ಪಂದ್ಯ ಸ್ಥಗಿತ) ಆಧಾರದಲ್ಲಿ ಪ್ಯಾಲೆಸ್ಟೀನ್‌ನ ಫೊಕಹಾ ನಿಡಾಲ್ ಅವರನ್ನು ಮಣಿಸಿದರು. ಜಿದ್ದಾಜಿದ್ದಿಯ ಈ ಬೌಟ್‌ನಲ್ಲಿ ಇಬ್ಬರ ಮಧ್ಯೆ ಬಿರುಸಿನ ಪಂಚ್‌ಗಳ ವಿನಿಯಮ ನಡೆಯಿತು. ಬಲಿಷ್ಠ ಹುಕ್‌ಗಳ ಮೂಲಕ ಭಾರತದ ಬಾಕ್ಸರ್‌ ಎದುರಾಳಿಯನ್ನು ಗಾಯಗೊಳಿಸಿದರು. ಅಂತಿಮವಾಗಿ ಸ್ಫರ್ಧೆ ಸ್ಥಗಿತಗೊಳಿಸಿದ ರೆಫರಿ, ನಿಶಾಂತ್ ಅವರನ್ನು ಜಯಶಾಲಿಯನ್ನಾಗಿ ಪ್ರಕಟಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.