ಥಾಯ್ಲೆಂಡ್‌ ಓಪನ್ ಬಾಕ್ಸಿಂಗ್ ಟೂರ್ನಿ: ಸೆಮಿಫೈನಲ್‌ ತಲುಪಿದ ಸುಮಿತ್ ನವದೆಹಲಿ: ಎದುರಾಳಿಯನ್ನು ಸುಲಭವಾಗಿ ಮಣಿಸಿದ ಭಾರತದ ಸುಮಿತ್‌, ಥಾಯ್ಲೆಂಡ್‌ ಓಪನ್ ಬಾಕ್ಸಿಂಗ್ ಟೂರ್ನಿಯ ಸೆಮಿಫೈನಲ್‌ ಪ್ರವೇಶಿಸಿದ್ದಾರೆ. ಥಾಯ್ಲೆಂಡ್‌ನ ಫುಕೆಟ್‌ನಲ್ಲಿ ನಡೆಯುತ್ತಿರುವ ಟೂರ್ನಿಯ 75 ಕೆಜಿ ವಿಭಾಗದ ಕ್ವಾರ್ಟರ್‌ಫೈನಲ್ ಹಣಾಹಣಿಯಲ್ಲಿ ಸುಮಿತ್‌ 5–0ಯಿಂದ ಕಜಕಸ್ತಾನಸ ತೈಮೂರ್‌ ನೂರ್‌ಸಿಟೊವ್ ಅವರಿಗೆ ಸೋಲಿನ ಪಂಚ್‌ ನೀಡಿದರು. ಭಾರತದ ಬಾಕ್ಸರ್‌ಗೆ ಮೊದಲ ಸುತ್ತಿನಲ್ಲಿ ಬೈ ಸಿಕ್ಕಿತ್ತು. ಮೋನಿಕಾ (48 ಕೆಜಿ), ಆಶಿಶ್ ಕುಮಾರ್‌ (81 ಕೆಜಿ) ಮತ್ತು ಮನೀಷಾ (57 ಕೆಜಿ) ಈಗಾಗಲೇ ನಾಲ್ಕರ ಘಟ್ಟ ತಲುಪಿದ್ದಾರೆ. 91 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಗೌರವ್‌ ಚೌಹಾನ್ ಎಂಟರಘಟ್ಟದಲ್ಲಿ ಮುಗ್ಗರಿಸಿದರು. ಅವರು 1–4ರಿಂದ 2018ರ ಯೂತ್ ಒಲಿಂಪಿಕ್ಸ್ ಚಾಂಪಿಯನ್‌ ಕಜಕಸ್ತಾನದ ಐಬೆಕ್‌ ಒರಲ್‌ಬೆ ಅವರಿಗೆ ಸೋತರು. 2019ರಲ್ಲಿ ನಡೆದಟೂರ್ನಿಯ ಕಳೆದ ಆವೃತ್ತಿಯಲ್ಲಿ ಭಾರತ ತಂಡದ ಎಂಟು ಮಂದಿ ಪದಕ ಗೆದ್ದುಕೊಂಡಿದ್ದರು. ಅದರಲ್ಲಿ ಒಂದು ಚಿನ್ನ, ನಾಲ್ಕು ಬೆಳ್ಳಿ ಮತ್ತು ಮೂರು ಕಂಚಿನ ಪದಕಗಳು ಇದ್ದವು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.