ಬ್ಯಾಸ್ಕೆಟ್‌ಬಾಲ್‌: ರೈಸಿಂಗ್‌ ಸ್ಟಾರ್‌ಗೆ ಗೆಲುವು ಬೆಂಗಳೂರು: ರೈಸಿಂಗ್‌ ಸ್ಟಾರ್‌ ಬಿಸಿ ಮೈಸೂರು ತಂಡವು ಎಂ.ಸಿ.ಶ್ರೀನಿವಾಸ ಸ್ಮಾರಕ ಟ್ರೋಫಿಗಾಗಿ ನಡೆಯುತ್ತಿರುವ ರಾಜ್ಯ ‘ಬಿ’ ಡಿವಿಷನ್‌ ಬ್ಯಾಸ್ಕೆಟ್‌ಬಾಲ್‌ ಲೀಗ್‌ ಚಾಂಪಿಯನ್‌ಷಿಪ್‌ನಲ್ಲಿ ಮತ್ತೊಂದು ಗೆಲುವು ದಾಖಲಿಸಿತು. ಆರಂಭಿಕ ಪಂದ್ಯದಲ್ಲಿ ಜೆಎಸ್‌ಸಿ ತಂಡವನ್ನು ಮಣಿಸಿದ್ದ ರೈಸಿಂಗ್‌ ಸ್ಟಾರ್‌, ಕಂಠೀರವ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಎರಡನೇ ಪಂದ್ಯದಲ್ಲಿ ಕೋರಮಂಗಲ ಎಸ್‌ಸಿ ತಂಡವನ್ನು 72–49ರಲ್ಲಿ ಮಣಿಸಿತು. ಅರ್ಪಣ್ (23 ಪಾಯಿಂಟ್ಸ್‌) ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಜಿದ್ದಾಜಿದ್ದಿನಿಂದ ಕೂಡಿದ್ದ ಇನ್ನೊಂದು ಪಂದ್ಯದಲ್ಲಿ ವಿವೇಕ್ಸ್‌ ಎಸ್‌ಸಿ ತಂಡವು 70–60ರ ಅಂತರದಲ್ಲಿ ಜೆಎಸ್‌ಸಿ ತಂಡವನ್ನು ಮಣಿಸಿತು. ರಾಜೇಶ್‌ (21 ಪಾಯಿಂಟ್ಸ್‌), ಆದಿತ್ಯ (20 ಪಾಯಿಂಟ್ಸ್‌) ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಮಧ್ಯಂತರದ ವೇಳೆ 33–33ರಿಂದ ಸಮಬಲ ಸಾಧಿಸಿದ್ದ ಇತ್ತಂಡಗಳು, ಬಳಿಕ ವಿವೇಕ್ಸ್‌ ತಂಡ ಮೈಲುಗೈ ಸಾಧಿಸಿತು. ಮತ್ತೊಂದು ಪಂದ್ಯದಲ್ಲಿ ರೋಹನ್‌ (25 ಪಾಯಿಂಟ್ಸ್‌) ಮತ್ತು ವಿಷ್ಣು (12 ಪಾಯಿಂಟ್ಸ್‌) ಅವರ ನೆರವಿನಿಂದ ದೇವಾಂಗ ಯೂನಿಯನ್‌ ತಂಡವು 75–35ರ ಅಂತರದಲ್ಲಿ ಪ್ರೊಟೆಕ್‌ ಅಸೋಸಿಯೇಷನ್‌ ಮೈಸೂರು ತಂಡವನ್ನು ಸೋಲಿಸಿತು. ಕೆಎಸ್‌ಪಿ ತಂಡವು ಮನೋಜ್‌ (22 ಪಾಯಿಂಟ್ಸ್‌) ಮತ್ತು ನಿತಿನ್‌ (20 ಪಾಯಿಂಟ್ಸ್‌) ಅವರ ಸಮಯೋಚಿತ ಆಟದಿಂದ 88–82ರ ಅಂತರದಲ್ಲಿ ಬಾಷ್‌ ತಂಡವನ್ನು ಮಣಿಸಿತು. ಬಾಷ್‌ ತಂಡದ ಶ್ರೇಯಸ್‌ ಶೆಟ್ಟಿ (31 ಪಾಯಿಂಟ್ಸ್‌) ಸೋಲಿನಲ್ಲೂ ಮಿಂಚಿದರು. ಮಧ್ಯಂತರದ ವೇಳೆ 43–44ರಿಂದ ಹಿಂದಿದ್ದ ಕೆಎಸ್‌ಪಿ ತಂಡ ನಂತರ ಪುಟಿದೆದ್ದಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.