ಬಜರಂಗ್‌ಗೆ ಫಿಸಿಯೊ ವ್ಯವಸ್ಥೆ ಮಾಡಲಾಗಿತ್ತು: ಡಬ್ಲ್ಯುಎಫ್‌ಐ ಸ್ಪಷ್ಟನೆ ನವದೆಹಲಿ: ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ಬಜರಂಗ್ ಪೂನಿಯಾ ಅವರಿಗೆ ರಾಷ್ಟ್ರೀಯ ಶಿಬಿರದಲ್ಲಿ ನೆರವಾಗಲು ಫಿಸಿಯೊ ವ್ಯವಸ್ಥೆ ಮಾಡಿದ್ದರೂ ಅವರ ನೆರವು ಪಡೆಯಲು ನಿರಾಕರಿಸಿದ್ದರು ಎಂದು ಭಾರತ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್‌ಐ) ಸ್ಪಷ್ಟಪಡಿಸಿದೆ. ಗಾಯಗಳಿಂದ ಚೇತರಿಸಿಕೊಳ್ಳಲು ಒಬ್ಬ ಕಾಯ್ದಿರಿಸಿದ ಫಿಸಿಯೊ ಪಡೆಯಲು ಪರದಾಟ ನಡೆಸಿದ್ದೆ ಎಂದುಟೋಕಿಯೊ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಬಜರಂಗ್ ಗುರುವಾರ ಹೇಳಿದ್ದರು. ರಾಷ್ಟ್ರೀಯ ಶಿಬಿರದಲ್ಲಿ ಫಿಸಿಯೊಗಳು ಲಭ್ಯವಿದ್ದರು. ಅವರು ಹಲವು ಕುಸ್ತಿಪಟುಗಳಿಗೆ ಚಿಕಿತ್ಸೆ ನೀಡಬೇಕಾಗುತ್ತದೆ.ಆದರೆ ಬಜರಂಗ್‌ ಅವರಂತಹ ಪ್ರಮುಖ ಕುಸ್ತಿಪಟುಗಳಿಗೆ ವೈಯಕ್ತಿಕ ಕಾಳಜಿ ಅಗತ್ಯ ಎಂದು ಅವರ ಕೋಚ್‌ ಸುಜೀತ್ ಮಾನ್ ಹೇಳಿದ್ದರು. ‘ಬಜರಂಗ್ ಅವರ ಕೋರಿಕೆಯಂತೆ, ಫಿಸಿಯೊಥೆರಪಿಸ್ಟ್‌ಗೆ ಸರ್ಕಾರದ ವೆಚ್ಚದಲ್ಲಿ ಸೋನಿಪತ್‌ನ ಭಾರತ ಕ್ರೀಡಾ ಪ್ರಾಧಿಕಾರ (ಸಾಯ್‌) ಕೇಂದ್ರದಲ್ಲಿ ತಂಗಲು ವ್ಯವಸ್ಥೆ ಮಾಡಲಾಗಿತ್ತು. ಡಾ ಆನಂದ್ ಕುಮಾರ್ ಅವರನ್ನು ಅವರ ಇಲಾಖೆಯಿಂದ ಬಿಡುಗಡೆ ಮಾಡದ ಕಾರಣ, ಈ ಪರ್ಯಾಯ ವ್ಯವಸ್ಥೆ ಮಾಡಲಾಗಿತ್ತು. ಆದರೆ ಬಜರಂಗ್ ಅವರ ಸೇವೆಯನ್ನು ನಿರಾಕರಿಸಿದ್ದರು‘ ಎಂದು ಡಬ್ಲ್ಯುಎಫ್‌ಐ ಪ್ರಕಟಣೆಯಲ್ಲಿ ತಿಳಿಸಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.