ಆರ್ಚರಿ: ಏಷ್ಯನ್ ಗೇಮ್ಸ್‌ಗೆ ಆಯ್ಕೆಯಾಗದ ದೀಪಿಕಾ ಸೋನಿಪತ್‌: ವಿಶ್ವಕಪ್‌ನಲ್ಲಿ ಹಲವು ಬಾರಿ ಚಿನ್ನದ ಪದಕ ಗೆದ್ದಿರುವ ದೀಪಿಕಾ ಕುಮಾರಿ ಅವರು ಏಷ್ಯನ್ ಗೇಮ್ಸ್ ಆರ್ಚರಿ ಸ್ಪರ್ಧೆಗೆ ಭಾರತ ತಂಡದಲ್ಲಿ ಸ್ಥಾನ ಗಳಿಸುವಲ್ಲಿ ವಿಫಲರಾಗಿದ್ದಾರೆ. ಇಲ್ಲಿಯ ಭಾರತ ಕ್ರೀಡಾ ಪ್ರಾಧಿಕಾರದ (ಸಾಯ್‌) ಕೇಂದ್ರದಲ್ಲಿ ನಡೆದ ಫೈನಲ್‌ ಲೆಗ್‌ನ ಮೂರು ರೌಂಡ್ ರಾಬಿನ್ ಪಂದ್ಯಗಳ ಪೈಕಿ ಎರಡರಲ್ಲಿ ಅವರು ಸೋಲನುಭವಿಸಿದರು. ಅಗ್ರ ಎಂಟು ಸ್ಥಾನಗಳನ್ನು ನಿರ್ಧರಿಸಲು ಶನಿವಾರ ನಡೆದ ಎರಡು ಹಂತದ ಎಲಿಮಿನೇಷನ್‌ನಲ್ಲಿ ದೀಪಿಕಾ ಐದನೇ ಸ್ಥಾನ ಗಳಿಸಿದ್ದರು. ಇದರಿಂದಾಗಿ ಅವರು ರೌಂಡ್‌ ರಾಬಿನ್ ಪಂದ್ಯಗಳಲ್ಲಿ ಆಡಬೇಕಾಯಿತು. ಚೀನಾದ ಹ್ಯಾಂಗ್‌ಜೌನಲ್ಲಿ ಸೆಪ್ಟೆಂಬರ್‌ 10ರಿಂದ 25ರವರೆಗೆ ಏಷ್ಯನ್ ಗೇಮ್ಸ್ ನಿಗದಿಯಾಗಿದೆ. ನವದೆಹಲಿಯಲ್ಲಿ 2010ರಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದ ಬಳಿಕ ಬಹುವಿಭಾಗಗಳ ಟೂರ್ನಿಯಿಂದ ಮೊದಲ ಬಾರಿಗೆ ದೀಪಿಕಾ ಹೊರಗುಳಿಯುತ್ತಿದ್ದಾರೆ. ಆ ಕೂಟದಲ್ಲಿ ಅವರು ಚಿನ್ನದ ಪದಕ ಗೆದ್ದುಕೊಂಡಿದ್ದರು. 27 ವರ್ಷದ ದೀಪಿಕಾ 2010, 2014 ಮತ್ತು 2018ರಲ್ಲಿ ಏಷ್ಯನ್ ಗೇಮ್ಸ್‌ಗಳಲ್ಲಿ ಭಾಗವಹಿಸಿದ್ದರು. 12 ವರ್ಷಗಳ ಹಿಂದೆ ಗುವಾಂಗ್‌ಜೌನಲ್ಲಿ ನಡೆದ ಕೂಟದಲ್ಲಿ ತಂಡ ವಿಭಾಗದಲ್ಲಿ ಅವರು ಕಂಚು ಗೆದ್ದಿದ್ದರು. ವಿಶ್ವಕಪ್ ಟೂರ್ನಿಗಳಲ್ಲಿ ದೀಪಿಕಾ ಒಟ್ಟು 11 ಚಿನ್ನ, 12 ಬೆಳ್ಳಿ ಮತ್ತು ಏಳು ಕಂಚಿನ ಪದಕಗಳನ್ನು ಜಯಿಸಿದ್ದಾರೆ. ಏಷ್ಯನ್ ಗೇಮ್ಸ್‌ಗೆ ಭಾರತ ತಂಡ ಇಂತಿದೆ: ಪುರುಷರ ರಿಕರ್ವ್‌: ತರುಣದೀಪ್ ರಾಯ್‌, ಜಯಂತ್ ತಾಲೂಕ್ದಾರ್‌, ನೀರಜ್ ಚೌಹಾನ್‌, ಸಚಿನ್ ಗುಪ್ತಾ. ಮಹಿಳೆಯರ ರಿಕರ್ವ್‌: ರಿಧಿ ಫೋರ್‌, ಕೋಮಲಿಕಾ ಭಾರಿ, ಅಂಕಿತಾ ಭಕತ್‌ ಮತ್ತು ಸಿಮ್ರನ್‌ಜೀತ್ ಕೌರ್‌. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.