ಕೋವಿಡ್‌: ಭಾರತ– ಇಂಗ್ಲೆಂಡ್‌ ಮಹಿಳಾ ಪ್ರೊ ಲೀಗ್ ಹಾಕಿ ಪಂದ್ಯಗಳು ಮುಂದಕ್ಕೆ ನವದೆಹಲಿ: ಇಂಗ್ಲೆಂಡ್ ತಂಡದ ಸದಸ್ಯರಲ್ಲಿ ಕೋವಿಡ್‌ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಭಾರತದ ಎದುರು ನಿಗದಿಯಾಗಿದ್ದ ಎಫ್‌ಐಎಚ್‌ ಮಹಿಳಾ ಪ್ರೊ ಲೀಗ್ ಹಾಕಿ ಪಂದ್ಯಗಳನ್ನು ಮುಂದೂಡಲಾಗಿದೆ. ಭುವನೇಶ್ವರದ ಕಳಿಂಗ ಕ್ರೀಡಾಂಗಣದಲ್ಲಿ ಏಪ್ರಿಲ್ ಎರಡು ಮತ್ತು ಮೂರರಂದು ಈ ಪಂದ್ಯಗಳು ನಡೆಯಬೇಕಿತ್ತು. ಈ ಕುರಿತು ಟ್ವೀಟ್ ಮಾಡಿರುವ ಅಂತರರಾಷ್ಟ್ರೀಯ ಹಾಕಿ ಫೆಡರೇಷನ್‌ (ಎಫ್‌ಐಎಚ್‌) ‘ಇಂಗ್ಲೆಂಡ್‌ ತಂಡದ ಹೆಚ್ಚಿನ ಸದಸ್ಯರಲ್ಲಿ ಕೋವಿಡ್‌ ಪತ್ತೆಯಾಗಿದೆ ಮತ್ತು ಗಾಯದ ಸಮಸ್ಯೆ ಕಾಡಿದೆ. ಹೀಗಾಗಿ ಪಂದ್ಯಗಳನ್ನು ಮುಂದೂಡಲಾಗಿದೆ. ಹಾಕಿ ಇಂಡಿಯಾ, ಇಂಗ್ಲೆಂಡ್‌ ಹಾಕಿ ಮಂಡಳಿಗಳೊಂದಿಗೆ ಚರ್ಚಿಸಿ ಮುಂದಿನ ಮಾಹಿತಿ ನೀಡಲಾಗುವುದು‘ ಎಂದು ಹೇಳಿದೆ. ಭಾರತ ಮಹಿಳಾ ತಂಡವು ಪ್ರೋ ಲೀಗ್‌ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಮೂರು ಪಂದ್ಯಗಳಲ್ಲಿ ಗೆಲುವು, ಎರಡರಲ್ಲಿ ಡ್ರಾ ಮತ್ತು ಒಂದರಲ್ಲಿ ಸೋಲನುಭವಿಸಿದೆ. ಭಾರತ ಮತ್ತು ಇಂಗ್ಲೆಂಡ್‌ ಪುರುಷರ ತಂಡಗಳ ನಡುವಣ ಪಂದ್ಯಗಳು ನಿಗದಿಯಂತೆ ಈ ವಾರಾಂತ್ಯದಲ್ಲಿ ನಡೆಯಲಿವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.