ಡಬ್ಲ್ಯುಟಿಟಿ ಸ್ಟಾರ್‌ ಕಂಟೆಂಡರ್‌ ಟೇಬಲ್ ಟೆನಿಸ್ ಸೆಮಿಫೈನಲ್‌ಗೆ ಅರ್ಚನಾ ಕಾಮತ್‌ ದೋಹಾ: ಭಾರತದ ಮಣಿಕಾ ಬಾತ್ರಾ ಮತ್ತು ಅರ್ಚನಾ ಕಾಮತ್ ಅವರು ಡಬ್ಲ್ಯುಟಿಟಿ ಸ್ಟಾರ್‌ ಕಂಟೆಂಡರ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಇಲ್ಲಿ ನಡೆಯುತ್ತಿರುವ ಟೂರ್ನಿಯ ಮಹಿಳಾ ಡಬಲ್ಸ್ ವಿಭಾಗದ ಎಂಟರಘಟ್ಟದ ಹಣಾಹಣಿಯಲ್ಲಿ ಮಂಗಳವಾರ ಭಾರತದ ಜೋಡಿ13-11, 8-11, 11-5, 13-11ರಿಂದ ಹಾಂಗ್‌ಕಾಂಗ್‌ನ ಸೂ ವೈ ಯಾಮ್ ಮಿನ್ನಿ ಮತ್ತು ಲೀ ಹೊಂಗ್ ಅವರನ್ನು ಮಣಿಸಿದರು. ಜಿದ್ದಾಜಿದ್ದಿನ ಮೊದಲ ಗೇಮ್‌ಅನ್ನು ಕೈವಶ ಮಾಡಿಕೊಂಡ ಅರ್ಚನಾ– ಮಣಿಕಾ, ಎರಡನೇ ಗೇಮ್‌ನಲ್ಲಿ ಆರಂಭದಲ್ಲಿ ಮುನ್ನಡೆ ಸಾಧಿಸಿದರೂ ಬಳಿಕ ಕೈಚೆಲ್ಲಿದರು. ಮೂರನೇ ಗೇಮ್‌ ಸುಲಭವಾಗಿ ಭಾರತದ ಆಟಗಾರ್ತಿಯರ ಪಾಲಾಯಿತು. ನಾಲ್ಕನೇ ಗೇಮ್‌ನಲ್ಲಿ ಪೈಪೋಟಿ ಕಂಡುಬಂದರೂ ಒತ್ತಡ ಮೀರುವಲ್ಲಿ ಆರನೇ ಕ್ರಮಾಂಕದ ಜೋಡಿ ಯಶಸ್ವಿಯಾದರು. ನಾಲ್ಕರ ಘಟ್ಟದಲ್ಲಿ ಮಣಿಕಾ ಮತ್ತು ಅರ್ಚನಾ ಅವರಿಗೆ ತೈಪೆಯ ಲಿ ಯು ಜುನ್ ಮತ್ತು ಚೆಂಗ್ ಐ ಚಿಂಗ್ ಸವಾಲು ಎದುರಾಗಿದೆ. ಮಿಶ್ರ ಡಬಲ್ಸ್‌ನಲ್ಲಿ ಜಿ.ಸತ್ಯನ್ ಜೊತೆಗೂಡಿದ ಮಣಿಕಾ ಮೊದಲ ಸುತ್ತಿನಲ್ಲಿ7-11, 11-9, 7-11, 5-11ರಿಂದ ಸ್ಪೇನ್‌ನ ಮರಿಯೊ ಕ್ಷಿಯೊ ಮತ್ತು ಆಲ್ವಾರೊ ರೊಬ್ಲೆಸ್‌ ಎದುರು ಸೋತರು. ಇದಕ್ಕೂ ಮೊದಲು ಶರತ್‌ ಕಮಲ್‌ ಮತ್ತು ಮಾನವ್ ವಿಕಾಸ್ ಥಕ್ಕರ್‌ ಪುರುಷರ ಡಬಲ್ಸ್‌ ಪಂದ್ಯದಲ್ಲಿ ಸ್ಪೇನ್‌ನ ರೊಬ್ಲೆಸ್‌ ಮತ್ತು ರೂಮೇನಿಯಾದ ಒವಿದು ಲೊನೆಸ್ಕು ಅವರಿಗೆ ಮಣಿದಿದ್ದರು. ಸಿಂಗಲ್ಸ್ ವಿಭಾಗದ ಪ್ರೀಕ್ವಾರ್ಟರ್‌ನಲ್ಲಿ ಸತ್ಯನ್‌8-11, 3-11, 11-6, 11-7, 11-6ರಿಂದ ಸ್ವೀಡನ್‌ನ ಮತಿಯಾಸ್ ಫಾಲ್ಕ್ ಎದುರು ಗೆದ್ದು ಪ್ರೀಕ್ವಾರ್ಟರ್‌ಫೈನಲ್ ಪ್ರವೇಶಿಸಿದರೆ, ಮಹಿಳಾ ಸಿಂಗಲ್ಸ್‌ನ ಎರಡನೇ ಸುತ್ತಿನಲ್ಲಿ ಮಣಿಕಾ7-11, 11-6, 11-7, 11-9ರಿಂದ ಜರ್ಮನಿಯ ಕ್ಸಿಯೊನಾ ಶಾನ್‌ ಎದುರು ಜಯಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.