ಸ್ವಿಸ್‌ ಓಪನ್ ಬ್ಯಾಡ್ಮಿಂಟನ್: ಋತುವಿನ ಎರಡನೇ ಪ್ರಶಸ್ತಿಗೆ ಮುತ್ತಿಟ್ಟ ಭಾರತ ಬಾಸೆಲ್‌, ಸ್ವಿಟ್ಜರ್‌ಲೆಂಡ್‌: ಪ್ರತಿಷ್ಠಿತ ವಿಶ್ವ ಚಾಂಪಿಯನ್‌ಷಿಪ್ ಗೆದ್ದ ಸುಮಧುರ ನೆನಪುಗಳ ನೆಲದಲ್ಲಿ ಭಾರತದ ಪಿ.ವಿ.ಸಿಂಧು ಮತ್ತೊಮ್ಮೆ ಪಾರಮ್ಯ ಮೆರೆದರು. ಥಾಯ್ಲೆಂಡ್‌ನ ಬುಸಾನನ್‌ ಒಂಗ್‌ಬಮ್ರುಂಗ್‌ಪನ್‌ ಸವಾಲು ಮೀರಿದ ಅವರು ಸ್ವಿಸ್‌ ಓಪನ್ ಸೂಪರ್‌ 300 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾನುವಾರ ಪ್ರಶಸ್ತಿಗೆ ಮುತ್ತಿಕ್ಕಿದರು. ಪುರುಷರ ಸಿಂಗಲ್ಸ್ ವಿಭಾಗದ ಫೈನಲ್‌ನಲ್ಲಿ ವೀರೋಚಿತ ಹೋರಾಟ ತೋರಿದಎಚ್‌.ಎಸ್‌.ಪ‍್ರಣಯ್ ರನ್ನರ್‌ ಅಪ್ ಸ್ಥಾನ ಗಳಿಸಿದರು. ಫೈನಲ್‌ನಲ್ಲಿ ಅವರು ಏಷ್ಯನ್‌ ಗೇಮ್ಸ್ ಚಿನ್ನದ ಪದಕ ವಿಜೇತ, ಇಂಡೊನೇಷ್ಯಾದ ಜೊನಾಥನ್ ಕ್ರಿಸ್ಟಿ ಎದುರು ಎಡವಿದರು. ಸಿಂಧುಗೆ ಈ ಋತುವಿನಲ್ಲಿ ಒಲಿದ ಎರಡನೇ ಪ್ರಶಸ್ತಿ ಇದು. ಜನವರಿಯಲ್ಲಿ ಲಖನೌನಲ್ಲಿ ನಡೆದ ಸಯ್ಯದ್‌ ಮೋದಿ ಅಂತರರಾಷ್ಟ್ರೀಯ ಸೂಪರ್ 300 ಟೂರ್ನಿಯಲ್ಲಿ ಅವರು ಚಾಂಪಿಯನ್ ಆಗಿ ಹೊರಹೊಮ್ಮಿದ್ದರು. ಎರಡು ಬಾರಿಯ ಒಲಿಂಪಿಕ್ಸ್ ಪದಕ ವಿಜೇತೆ ಸಿಂಧು, ಟೂರ್ನಿಯ ಸತತ ಎರಡನೇ ಆವೃತ್ತಿಯಲ್ಲಿ ಫೈನಲ್ ತಲುಪಿದ್ದರು. ಸೇಂಟ್‌ ಜಾಕಬ್‌ಶಾಲ್‌ ಕ್ರೀಡಾಂಗಣದಲ್ಲಿ ನಡೆದ 49 ನಿಮಿಷಗಳ ಹಣಾಹಣಿಯಲ್ಲಿ 21–16, 21–8ರಿಂದ ಭಾರತದ ಆಟಗಾರ್ತಿಗೆ ಗೆಲುವು ಒಲಿಯಿತು. 2021ರಆವೃತ್ತಿಯ ಫೈನಲ್‌ನಲ್ಲಿ ಸ್ಪೇನ್‌ನ ಕರೋಲಿನಾ ಮರಿನ್ ಎದುರು ಸೋತಿದ್ದ ಸಿಂಧು ಇಲ್ಲಿ ಕನಸು ನನಸಾಗಿಸಿಕೊಂಡರು. ಬಾಸೆಲ್‌ನಲ್ಲಿಯೇ ನಡೆದಿದ್ದ 2019ರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಆಟಗಾರ್ತಿ ಜಪಾನ್‌ನ ನೊಜೊಮಿ ಒಕುಹರಾ ಅವರನ್ನು ಸೋಲಿಸಿ ಪ್ರಶಸ್ತಿ ಒಲಿಸಿಕೊಂಡಿದ್ದರು. ಬುಸಾನನ್‌ ಎದುರು ಆಡಿದ 17 ಪಂದ್ಯಗಳ ಪೈಕಿ ಸಿಂಧು ಗೆದ್ದ 16ನೇ ಹಣಾಹಣಿ ಇದು. ಮೊದಲ ಗೇಮ್‌ನ ಆರಂಭದಲ್ಲಿ ಆಕ್ರಮಣಕಾರಿ ಆಟದ ಮೂಲಕ 3–0ಯೊಂದಿಗೆ ಮುನ್ನಡೆದ ಸಿಂಧು ಅವರಿಗೆ ಬುಸಾನನ್ ತಿರುಗೇಟು ನೀಡಿ, 7–7ರ ಸಮಬಲಕ್ಕೆ ತಂದರು. ಜಿ‌ದ್ದಾಜಿದ್ದಿನ ಪೈಪೋಟಿ ಕಂಡ ಗೇಮ್‌ನಲ್ಲಿ ಭಾರತದ ಆಟಗಾರ್ತಿ ವಿರಾಮದ ಹೊತ್ತಿಗೆ ಎರಡು ಪಾಯಿಂಟ್‌ಗಳ ಮೇಲುಗೈ ಸಾಧಿಸಿದರು.ಬುಸಾನನ್‌ ಡ್ರಾಪ್ ಶಾಟ್‌ಗಳ ಮೂಲಕ ಗಮನಸೆಳೆದರೆ, ಸಿಂಧು ರಕ್ಷಣಾತ್ಮಕ ಕೌಶಲಗಳ ಮೊರೆ ಹೋದರು. ಬ್ಯಾಕ್‌ಲೈನ್‌ನಲ್ಲಿ ನಿಖರ ಆಟದ ಮೂಲಕ ಸಿಂಧು ನಾಲ್ಕು ಗೇಮ್ ಪಾಯಿಂಟ್ಸ್ ಗಳಿಸಿ ಮೊದಲ ಗೇಮ್‌ ಗೆದ್ದುಕೊಂಡರು. ಎರಡನೇ ಗೇಮ್‌ನಲ್ಲಿ ಸಿಂಧು ಸಂಪೂರ್ಣ ಅಧಿಪತ್ಯ ಸಾಧಿಸಿದರು. ಆಕ್ರಮಣದ ಆಟಕ್ಕೆ ಹೆಚ್ಚು ಒತ್ತು ನೀಡಿದ ಅವರು ವಿರಾಮದ ವೇಳೆ ಒಂಬತ್ತು ಪಾಯಿಂಟ್‌ಗಳಿಂದ ಮುಂದಿದ್ದರು. ಅದೇ ಲಯದೊಂದಿಗೆ ಮುನ್ನುಗ್ಗಿ ಗೇಮ್ ಹಾಗೂ ಪಂದ್ಯ ಗೆದ್ದು ಸಂಭ್ರಮಿಸಿದರು. ಪ್ರಣಯ್‌ ಹೋರಾಟದ ಆಟ: ಕಳೆದ ಐದು ವರ್ಷಗಳಲ್ಲಿ ಮೊದಲ ಬಾರಿ ಟೂರ್ನಿಯೊಂದರ ಫೈನಲ್ ತಲುಪಿದ್ದ ಪ್ರಣಯ್ ಅವರ ಪ್ರಶಸ್ತಿ ಗೆಲುವಿನ ಆಸೆ ಈಡೇರಲಿಲ್ಲ. ಜೊನಾಥನ್ ಅವರ ಚುರುಕಿನ ಆಟಕ್ಕೆ ಹೊಂದಿಕೊಳ್ಳಲು ಅವರಿಗೆ ಸಾಧ್ಯವಾಗಲಿಲ್ಲ. ಪ್ರಣಯ್‌ 12-21, 18-21ರಿಂದ ಜೊನಾಥನ್‌ಗೆ ಮಣಿದರು. ಮೊದಲ ಗೇಮ್‌ನ ಆರಂಭದಲ್ಲಿ 1–5ರಿಂದ ಹಿನ್ನಡೆಯಲ್ಲಿದ್ದ ಪ್ರಣಯ್‌ ಬಳಿಕ 5–5ರ ಸಮಬಲ ಸಾಧಿಸಿದರು. ಜಿದ್ದಾಜಿದ್ದಿನ ಪೈಪೋಟಿಯಲ್ಲಿ ಗೇಮ್‌ ಜೊನಾಥನ್ ಪಾಲಾಯಿತು. ಎರಡನೇ ಗೇಮ್‌ನ ಆರಂಭದಲ್ಲೂ ಉಭಯ ಆಟಗಾರರು 7–7ರ ಸಮಬಲದಲ್ಲಿ ಸಾಗಿದ್ದರು. ಆದರೆ ವಿರಾಮದ ವೇಳೆಗೆ 11–7ರಿಂದ ಮೇಲುಗೈ ಸಾಧಿಸಿದರು. ಆದರೆ ಮತ್ತೆ ಪುಟಿದೆದ್ದ ಪ್ರಣಯ್‌ ಗೇಮ್‌ಅನ್ನು 13–13ರ ಸಮಬಲಕ್ಕೆ ತಂದರು. ತೀವ್ರ ಪೈಪೋಟಿ ನಡೆಸಿದರೂ ಗೇಮ್‌ ಹಾಗೂ ಪಂದ್ಯವು ಇಂಡೊನೇಷ್ಯಾ ಆಟಗಾರನ ಕೈವಶ ಆಗುವುದನ್ನು ಪ್ರಣಯ್‌ ಅವರಿಗೆ ತಪ್ಪಿಸಲಾಗಲಿಲ್ಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.