ಆರ್ಲಿಯನ್ಸ್ ಮಾಸ್ಟರ್ಸ್‌: ಪ್ರಣೀತ್‌ಗೆ ಜಯ ಅರ್ಲಿಯನ್ಸ್‌ (ಫ್ರಾನ್ಸ್‌): ಭಾರತದ ಬಿ.ಸಾಯ್ ಪ್ರಣೀತ್ ಇಲ್ಲಿ ನಡೆಯುತ್ತಿರುವ ಆರ್ಲಿಯನ್ಸ್ ಮಾಸ್ಟರ್ಸ್‌ ಸೂಪರ್ 100 ಬ್ಯಾಡ್ಮಿಂಟನ್ ಟೂರ್ನಿಯ ಮೂರನೇ ಸುತ್ತು ಪ್ರವೇಶಿಸಿದ್ದಾರೆ. ಬುಧವಾರ ನಡೆದ ಪಂದ್ಯದಲ್ಲಿ ಅವರು ಜೆಕ್ ಗಣರಾಜ್ಯದ ಜ್ಯಾನ್ ಲೊಡ ವಿರುದ್ಧ 21-19, 21-12ರಲ್ಲಿ ಜಯ ಗಳಿಸಿದರು. ಮಹಿಳೆಯರ ಸಿಂಗಲ್ಸ್‌ನಲ್ಲಿ ಅನುಪಮಾ ಉಪಾಧ್ಯಾಯ ಮತ್ತು ಇರಾ ಶರ್ಮಾ ಎರಡನೇ ಸುತ್ತು ಪ್ರವೇಶಿಸಿದರು. ಅನುಪಮಾ 21-12, 21-18ರಲ್ಲಿ ಸ್ವಿಟ್ಜರ್ಲೆಂಡ್‌ನ ಜೆಂಜಿರಾ ಸ್ಟಾಡೆಲ್‌ಮ್ಯಾನ್ ವಿರುದ್ಧ ಜಯ ಗಳಿಸಿದರೆ ಇರಾ 21-14, 21-17ರಲ್ಲಿ ಫ್ರಾನ್ಸ್‌ನ ಕ್ಯುಯಿ ಕ್ಸ್ವೆಫಿ ಎದುರು ಗೆದ್ದರು. ಮಿಶ್ರ ಡಬಲ್ಸ್ ವಿಭಾಗದಲ್ಲಿ ಇಶಾನ್ ಭಟ್ನಾಗರ್ ಮತ್ತು ತನಿಶಾ ಕ್ರಾಸ್ಟೊ ಭಾರತದವರೇ ಆದ ಅಶಿತ್ ಸೂರ್ಯ ಮತ್ತು ಶ್ವೇತಪರ್ಣ ಪಂಡಾ ಅವರನ್ನು 21-8, 21-10ರಲ್ಲಿ ಸೋಲಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.