ಲಾಟ್ ಗಾಲ್ಫ್‌: ಹ್ಯೋ ಕಿಮ್‌ಗೆ ಚಾಂಪಿಯನ್ ಪಟ್ಟ ಇವಾ ಬೀಚ್, ಹವಾಯ್: ದಕ್ಷಿಣ ಕೊರಿಯಾದ ಹ್ಯೊ ಜೂ ಕಿಮ್ ಅವರು ಭಾನುವಾರ ಮುಕ್ತಾಯಗೊಂಡ ಎಲ್‌ಪಿಜಿಎ ಟೂರ್‌ ಲಾಟ್ ಗಾಲ್ಫ್ ಚಾಂಪಿಯನ್‌ಷಿಪ್‌ನ ಪ್ರಶಸ್ತಿ ಗೆದ್ದುಕೊಂಡರು. ಜಪಾನ್‌ನ ಹಿನಾಕೊ ಶಿಬುವಾನೊ ಅವರ ಪ್ರಬಲ ಸವಾಲನ್ನು ಮೆಟ್ಟಿನಿಂತ ಅವರು ಕೊನೆಯ ಹಂತದಲ್ಲಿ ದಿಟ್ಟ ಆಟವಾಡಿ ಗೆಲುವು ಸಾಧಿಸಿದರು. ಇದು ಅವರ ಐದನೇ ಎಲ್‌ಪಿಜಿಎ ಟೂರ್ ಪ್ರಶಸ್ತಿಯಾಗಿದೆ. ‘ನನ್ನ ಮೇಲೆ ಬಹಳ ಮಂದಿಗೆ ನಿರೀಕ್ಷೆಗಳಿದ್ದವು. ಗೆಳೆಯರು ಮತ್ತು ಕುಟುಂಬದ ಸದಸ್ಯರಿಂದ ಸಾಕಷ್ಟು ಬೆಂಬಲ ಲಭಿಸಿದ್ದರಿಂದ ಭರವಸೆ ಮೂಡಿತು. ಪ್ರಶಸ್ತಿ ಗೆಲ್ಲಲು ಅದು ಪ್ರೇರಣೆಯಾಯಿತು’ ಎಂದು ಕಿಮ್ ಹೇಳಿದರು. 2014ರ ಎವಿಯಾನ್ ಚಾಂಪಿಯನ್‌ಷಿಪ್‌ನಲ್ಲಿ ‍ಪ್ರಶಸ್ತಿ ಗೆಲ್ಲುವ ಮೂಲಕ ‘ಮೇಜರ್’ ಟೂರ್ನಿಯಲ್ಲಿ ಅಮೋಘ ಸಾಧನೆ ಮಾಡಿದ್ದ 26 ವರ್ಷದ ಕಿಮ್ ಎರಡು ಮತ್ತು ಮೂರನೇ ಸುತ್ತಿನ ಅಂತ್ಯಕ್ಕೆ ಮೂರು ಸ್ಟ್ರೋಕ್‌ಗಳ ಮುನ್ನಡೆ ಗಳಿಸಿದ್ದರು. ಆದರೆ ಅಂತಿಮ ಸುತ್ತಿನಲ್ಲಿ ಜಪಾನ್ ಆಟಗಾರ್ತಿಯಿಂದ ಭಾರಿ ಪೈಪೋಟಿ ಕಂಡುಬಂತು. ಹವಾಮಾನವೂ ಅವರಿಗೆ ಸವಾಲಾಗಿತ್ತು. 2012 ಆರಂಭಗೊಂಡ ಲಾಟ್ ಚಾಂಪಿಯನ್‌ಷಿಪ್‌ನ ಎಲ್ಲ 10 ಆವೃತ್ತಿಗಳಲ್ಲಿ ಆಡಿದ 10 ಆಟಗಾರ್ತಿಯರಲ್ಲಿ ಕಿಮ್ ಒಬ್ಬರು. ಈ ಚಾಂಪಿಯನ್‌ಷಿಪ್‌ ತಮ್ಮ ವೃತ್ತಿಜೀವನದ ಮೇಲೆ ಭಾರಿ ಪ್ರಭಾವ ಬೀರಿದೆ ಎಂದು ಅವರು ತಿಳಿಸಿದರು. ಕಿಮ್ ಮತ್ತು ಶಿಬುವಾನೊ ಜೊತೆಯಲ್ಲಿ ಕೊನೆಯ ಸುತ್ತಿನ ವರೆಗೆ ಉತ್ತಮ ಸಾಮರ್ಥ್ಯ ತೋರಿದ್ದ ಅಮೆರಿಕದ ಬ್ರಿಯಾನ ಡು ಕೊನೆಯ ಸುತ್ತಿನಲ್ಲಿ ನಿರಾಸೆಗೊಂಡರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.