ಭಾರತಕ್ಕೆ ಮಣಿದ ಜರ್ಮನಿ ಭುವನೇಶ್ವರ: ಭಾರತ ಹಾಕಿ ತಂಡವು ಅನನುಭವಿ ಜರ್ಮನಿ ವಿರುದ್ಧ ಮತ್ತೊಮ್ಮೆ ಪಾರಮ್ಯ ಮೆರೆಯಿತು. ಶುಕ್ರವಾರ ಇಲ್ಲಿ ನಡೆದ ಎಫ್ಐಎಚ್‌ ಪ್ರೊ ಲೀಗ್‌ ಎರಡನೇ ಲೆಗ್‌ನಲ್ಲಿ 3–1ರಿಂದ ಗೆದ್ದು ಪಾಯಿಂಟ್ಸ್ ‍ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಇನ್ನಷ್ಟು ಭದ್ರಪಡಿಸಿಕೊಂಡಿತು. ಅಮಿತ್ ರೋಹಿದಾಸ್‌ ನಾಯಕತ್ವದ ಭಾರತದ ಪರ ಸುಖಜೀತ್ ಸಿಂಗ್‌ (19ನೇ ನಿಮಿಷ), ವರುಣ್ ಕುಮಾರ್ (41ನೇ ನಿಮಿಷ) ಮತ್ತು ಅಭಿಷೇಕ್ ಸಿಂಗ್‌ (54ನೇ ನಿ.) ಕೈಚಳಕ ತೋರಿದರು. ಪ್ರವಾಸಿ ತಂಡದ ಏಕೈಕ ಗೋಲನ್ನು ಆ್ಯಂಟನ್‌ ಬೆಕೆಲ್‌ (45ನೇ ನಿ.) ದಾಖಲಿಸಿದರು. ಗುರುವಾರ ನಡೆದ ಮೊದಲ ಹಣಾಹಣಿಯಲ್ಲಿ ಭಾರತ 3–0ಯಿಂದ ಜಯ ಸಾಧಿಸಿತ್ತು. ಭಾರತ ಸದ್ಯ ಲೀಗ್‌ನಲ್ಲಿ 12 ಪಂದ್ಯಗಳಿಂದ 27 ಪಾಯಿಂಟ್ಸ್ ಕಲೆಹಾಕಿದೆ. ಎರಡನೇ ಸ್ಥಾನದಲ್ಲಿರುವ ಜರ್ಮನಿ ಬಳಿ 17 ಪಾಯಿಂಟ್‌ಗಳಿವೆ. ಆ ತಂಡವು 10 ಪಂದ್ಯಗಳನ್ನು ಆಡಿದೆ. ಈ ಪಂದ್ಯದ ಮೊದಲ ಕ್ವಾರ್ಟರ್‌ನಲ್ಲಿ ಚುರುಕಿನ ಆಟವಾಡಿದರೂ ಅಮಿತ್‌ ಬಳಗಕ್ಕೆ ಗೋಲು ದಾಖಲಿಸಲು ಸಾಧ್ಯವಾಗಲಿಲ್ಲ. ಎರಡನೇ ಕ್ವಾರ್ಟರ್‌ ಆರಂಭವಾದ ನಾಲ್ಕನೇ ನಿಮಿಷದಲ್ಲಿ ಸೊಗಸಾದ ಫೀಲ್ಡ್ ಗೋಲು ದಾಖಲಿಸಿದ ಸುಖಜೀತ್ ಭಾರತಕ್ಕೆ ಮುನ್ನಡೆ ಒದಗಿಸಿಕೊಟ್ಟರು. ಇದು ಅವರಿಗೆ ಎರಡನೇ ಅಂತರರಾಷ್ಟ್ರೀಯ ಗೋಲು. ಎರಡನೇ ಕ್ವಾರ್ಟರ್‌ನ ಅಂತ್ಯದಲ್ಲಿ ಜರ್ಮನಿ ತಂಡದ ಗೋಲು ಗಳಿಕೆಯ ಅವಕಾಶವೊಂದನ್ನು ಭಾರತದ ಗೋಲ್‌ಕೀಪರ್ ಕೃಷ್ಣ ಬಹಾದ್ದೂರ್ ಪಾಠಕ್ ಯಶಸ್ವಿಯಾಗಿ ತಡೆದರು. 33ನೇ ನಿಮಿಷದಲ್ಲಿ ಆತಿಥೇಯ ತಂಡಕ್ಕೆ ಪೆನಾಲ್ಟಿ ಕಾರ್ನರ್‌ ಅವಕಾಶ ಲಭಿಸಿತು. ಆದರೆ ಹರ್ಮನ್‌ ಪ್ರೀತ್ ಸಿಂಗ್ ಹೊಡೆದ ಚೆಂಡು ತಡೆಯುವಲ್ಲಿ ಜರ್ಮನಿ ಗೋಲ್‌ಕೀಪರ್ ಜೀನ್ ಡ್ಯಾನ್‌ಬರ್ಗ್‌ ಯಶಸ್ವಿಯಾದರು. 41ನೇ ನಿಮಿಷದಲ್ಲಿ ದೊರೆತ ಮತ್ತೊಂದು ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ವರುಣ್ ಕುಮಾರ್ ಗೋಲು ಗಳಿಸುವಲ್ಲಿ ತಪ್ಪು ಮಾಡಲಿಲ್ಲ. ಇದಾದ ನಾಲ್ಕು ನಿಮಿಷಗಳ ಬಳಿಕ ಜರ್ಮನಿಯ ಬೆಕೆಲ್‌ ತಂಡದ ಹಿನ್ನಡೆಯನ್ನು 1–2ಕ್ಕೆ ತಗ್ಗಿಸಿದರು. ಆದರೆ ಹರ್ಮನ್‌ಪ್ರೀತ್ ನೀಡಿದ ಪಾಸ್‌ನಲ್ಲಿ ಚೆಂಡನ್ನು ಗುರಿ ಸೇರಿಸಿದ ಅಭಿಷೇಕ್ ಭಾರತ ತಂಡದ ಸಂಭ್ರಮವನ್ನು ಹೆಚ್ಚಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.