ಐಎಸ್‌ಎಸ್‌ಎಫ್‌ ವಿಶ್ವಕಪ್‌ ಶೂಟಿಂಗ್‌: ದಿವ್ಯಾ– ಸರಬ್ಜೋತ್‌ ಜೋಡಿಗೆ ಚಿನ್ನ ಬಾಕು, ಅಜರ್‌ಬೈಜಾನ್‌: ಭಾರತದ ಟಿ.ಎಸ್. ದಿವ್ಯಾ ಹಾಗೂ ಸರಬ್ಜೋತ್ ಸಿಂಗ್ ಅವರು ಐಎಸ್‌ಎಸ್‌ಎಫ್ ವಿಶ್ವಕಪ್ ಶೂಟಿಂಗ್‌ನಲ್ಲಿ 10 ಮೀ. ಏರ್ ಪಿಸ್ತೂಲ್ ಮಿಶ್ರ ತಂಡ ವಿಭಾಗದಲ್ಲಿ ಚಿನ್ನ ಜಯಿಸಿದರು. ಚಿನ್ನದ ಪದಕ ನಿರ್ಣಯಿಸಲು ಗುರುವಾರ ನಡೆದ ಸ್ಪರ್ಧೆಯಲ್ಲಿ ಭಾರತದ ಜೋಡಿ 16–14 ರಲ್ಲಿ ಸರ್ಬಿಯದ ದಾಮಿರ್ ಮಿಕೆಚ್ ಮತ್ತು ಜೊರಾನಾ ಅರುನೊವಿಚ್‌ ಅವರನ್ನು ಮಣಿಸಿತು. ಇದಕ್ಕೂ ಮುನ್ನ ನಡೆದಿದ್ದ ಅರ್ಹತಾ ಸುತ್ತಿನಲ್ಲಿ ದಿವ್ಯಾ ಮತ್ತು ಸರಬ್ಜೋತ್‌ ಅವರು 581 ಪಾಯಿಂಟ್ಸ್‌ಗಳನ್ನು ಕಲೆಹಾಕುವ ಮೂಲಕ ಕಣದಲ್ಲಿದ್ದ 55 ತಂಡಗಳಲ್ಲಿ ಅಗ್ರಸ್ಥಾನ ಪಡೆದುಕೊಂಡಿದ್ದರು. ಇದೇ ವಿಭಾಗದಲ್ಲಿ ಸ್ಪರ್ಧಿಸಿದ್ದ ಭಾರತದ ಇಶಾ ಸಿಂಗ್‌ ಮತ್ತು ವರುಣ್‌ ತೋಮರ್‌ ಪದಕ ಸುತ್ತು ತಲುಪಲು ವಿಫಲರಾದರು. ಅವರು ಅರ್ಹತಾ ಹಂತದಲ್ಲಿ 578 ಪಾಯಿಂಟ್ಸ್‌ಗಳೊಂದಿಗೆ ಐದನೇ ಸ್ಥಾನ ಪಡೆದರು. ಸರಬ್ಜೋತ್‌ಗೆ ಅವರು ಸತತ ಎರಡು ಐಎಸ್‌ಎಸ್‌ಎಫ್‌ ವಿಶ್ವಕಪ್‌ನಲ್ಲಿ ಚಿನ್ನ ಗೆದ್ದ ಸಾಧನೆ ಮಾಡಿದರು. ಭೋಪಾಲ್‌ನಲ್ಲಿ ಮಾರ್ಚ್‌ ತಿಂಗಳಲ್ಲಿ ನಡೆದಿದ್ದ ಕೂಟದಲ್ಲಿ ಏರ್‌ ಪಿಸ್ತೂಲ್‌ ವೈಯಕ್ತಿಕ ವಿಭಾಗದಲ್ಲಿ ಚಿನ್ನ ಜಯಿಸಿದ್ದರು. ದಿವ್ಯಾ ಅವರಿಗೆ ಸೀನಿಯರ್‌ ವಿಭಾಗದಲ್ಲಿ ಲಭಿಸಿದ ಮೊದಲ ಪದಕ ಇದಾಗಿದೆ. ಟರ್ಕಿಯ ಇಸ್ಮಾಯಿಲ್‌ ಕೆಲೆಸ್‌ ಮತ್ತು ಸಿಮಲ್ ಯಿಲ್ಮಾಜ್‌ ಅವರು ಕಂಚಿನ ಪದಕ ಪಡೆದುಕೊಂಡರು. ಚಿನ್ನದ ಪದಕಕ್ಕಾಗಿ ನಡೆದ ಪೈಪೋಟಿಯಲ್ಲಿ ಭಾರತ ಮತ್ತು ಸರ್ಬಿಯದ ಜೋಡಿ 14–14 ರಲ್ಲಿ ಸಮಬಲ ಸಾಧಿಸಿತ್ತು. ತಮ್ಮ ಕೊನೆಯ ಪ್ರಯತ್ನದಲ್ಲಿ ಸರಬ್ಜೋತ್‌ 10.6 ಮತ್ತು ದಿವ್ಯಾ 9.9 ಪಾಯಿಂಟ್ಸ್‌ ಗಳಿಸಿದರು. ಸರ್ಬಿಯದ ದಾಮಿರ್‌ 10.3 ಪಾಯಿಂಟ್ಸ್‌ ಗಳಿಸಿದರೂ, ಜೊರಾನಾ ನಿಖರ ಗುರಿ ಹಿಡಿಯುವಲ್ಲಿ ವಿಫಲರಾಗಿ 8.6 ಪಾಯಿಂಟ್ಸ್‌ ಮಾತ್ರ ಗಳಿಸಿದರು. ಇದರಿಂದ ಭಾರತದ ಜೋಡಿಗೆ ಚಿನ್ನ ಒಲಿಯಿತು. 10 ಮೀ. ಏರ್‌ ರೈಫಲ್‌ ಮಿಶ್ರ ತಂಡ ವಿಭಾಗದ ಮೊದಲ ಎರಡೂ ಸ್ಥಾನಗಳನ್ನು ಚೀನಾ ತನ್ನದಾಗಿಸಿಕೊಂಡಿತು. ಜೆಕ್‌ ರಿಪಬ್ಲಿಕ್‌ ಮೂರನೇ ಸ್ಥಾನ ಗಳಿಸಿತು. ಈ ವಿಭಾಗದಲ್ಲಿ ಕಣದಲ್ಲಿದ್ದ ಭಾರತದ ತಿಲೋತ್ತಮ ಸೇನ್‌ ಮತ್ತು ಹೃದಯ್ ಹಜಾರಿಕಾ ಅವರು 17ನೇ ಸ್ಥಾನ ಪಡೆದರೆ, ರಮಿತಾ– ರುದ್ರಾಕ್ಷ್‌ ಪಾಟೀಲ್‌ ಅವರು 28ನೇ ಸ್ಥಾನ ಗಳಿಸಿದರು. ತಲಾ ಒಂದು ಚಿನ್ನ ಮತ್ತು ಕಂಚು ಗೆದ್ದಿರುವ ಭಾರತ ತಂಡ, ಪದಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಒಂದು ಚಿನ್ನ ಮತ್ತು ಬೆಳ್ಳಿ ಜಯಿಸಿರುವ ಚೀನಾ, ಅಗ್ರಸ್ಥಾನದಲ್ಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.