ಜೂನಿಯರ್ ಮಹಿಳಾ ವಿಶ್ವಕಪ್ ಹಾಕಿ: ದಕ್ಷಿಣ ಕೊರಿಯಾಗೆ ಸೋಲು ಪೊಚೆಫ್‌ಸ್ಟ್ರೂಮ್‌, ದಕ್ಷಿಣ ಆಫ್ರಿಕಾ: ಅಜೇಯ ಓಟ ಮುಂದುವರಿಸಿದ ಭಾರತ ತಂಡವು ಎಫ್‌ಐಎಚ್‌ ಜೂನಿಯರ್ ಮಹಿಳಾ ಹಾಕಿ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪ್ರವೇಶಿಸಿದೆ. ಶುಕ್ರವಾರ ನಡೆದ ಕ್ವಾರ್ಟರ್‌ಫೈನಲ್ ಹಣಾಹಣಿಯಲ್ಲಿ ಭಾರತದ ಮಹಿಳೆಯರು 3–0ಯಿಂದ ದಕ್ಷಿಣ ಕೊರಿಯಾ ತಂಡಕ್ಕೆ ಸೋಲುಣಿಸಿದರು. ಇದರೊಂದಿಗೆ ತಂಡವು ಗುಂಪು ಹಂತದಲ್ಲಿ ಎಲ್ಲ ಪಂದ್ಯಗಳನ್ನೂ ಗೆದ್ದು, ಎರಡನೇ ಬಾರಿ ಟೂರ್ನಿಯ ನಾಲ್ಕರ ಘಟ್ಟ ಪ್ರವೇಶಿಸಿತು. ಭಾರತದ ಪರ ಮುಮ್ತಾಜ್ ಖಾನ್‌ (11ನೇ ನಿಮಿಷ), ಲಾಲ್‌ರಿಂದಿಕಿ (15ನೇ ನಿಮಿಷ) ಮತ್ತು ಸಂಗೀತಾ ಕುಮಾರಿ (41ನೇ ನಿಮಿಷ) ಕೈಚಳಕ ತೋರಿದರು. ಜರ್ಮನಿಯಲ್ಲಿ ನಡೆದ 2013ರ ಆವೃತ್ತಿಯಲ್ಲಿ ಕಂಚಿನ ಪದಕ ಗೆದ್ದಿದ್ದು ಭಾರತ ತಂಡದ ಇದುವರೆಗಿನ ಮಹತ್ವದ ಸಾಧನೆಯಾಗಿದೆ. ಕೊರಿಯಾ ಎದುರಿನ ಪಂದ್ಯದಲ್ಲಿ ನಿಧಾನಗತಿಯ ಆರಂಭ ಪಡೆದ ಭಾರತ, 10ನೇ ನಿಮಿಷದಲ್ಲಿ ವೇಗದ ಆಟಕ್ಕೆ ಮೊರೆಹೋಯಿತು. ಇದರಿಂದ ತಂಡಕ್ಕೆ ಎರಡು ಪೆನಾಲ್ಟಿ ಕಾರ್ನರ್‌ಗಳು ಲಭಿಸಿದವು. ಮೊದಲ ಅವಕಾಶದಲ್ಲಿ ಶರ್ಮಿಳಾ ದೇವಿ ನೀಡಿದ ಪಾಸ್‌ನಲ್ಲಿ ಅದ್ಭುತ ಗೋಲು ಗಳಿಸಿದ ಮುಮ್ತಾಜ್ ಭಾರತಕ್ಕೆ ಮುನ್ನಡೆ ತಂದುಕೊಟ್ಟರು. ಇದು ಟೂರ್ನಿಯಲ್ಲಿ ಅವರು ಗಳಿಸಿದ ಆರನೇ ಗೋಲು. ಮೊದಲ ಕ್ವಾರ್ಟರ್‌ನ ಕೊನೆಯ ಸೆಕೆಂಡುಗಳಲ್ಲಿ ಲಾಲ್‌ರಿಂದಿಕಿ ತಂಡದ ಮುನ್ನಡೆಯನ್ನು 2–0ಗೆ ಹೆಚ್ಚಿಸಿದರು. ದೀಪಿಕಾ ಅವರ ರಿವರ್ಸ್‌ ಹೊಡೆತವನ್ನು ಕೊರಿಯಾ ಗೋಲ್‌ಕೀಪರ್‌ ಯುಂಜಿ ಕಿಮ್ ತಡೆದರು. ಆದರೆ ಈಹಂತದಲ್ಲಿ ಲಭಿಸಿದ ಚೆಂಡನ್ನು ಗುರಿ ಸೇರಿಸುವಲ್ಲಿ ಸಂಗೀತಾ ತಪ್ಪು ಮಾಡಲಿಲ್ಲ. ಎರಡನೇ ಕ್ವಾರ್ಟರ್‌ನಲ್ಲಿ ಉಭಯ ಆಟಗಾರ್ತಿಯರ ನಡುವೆ ಜಿದ್ದಾಜಿದ್ದಿ ಪೈಪೋಟಿ ನಡೆಯಿತು. ಭಾರತ ಡಿಫೆನ್ಸ್ ವಿಭಾಗ ಅತ್ಯಂತ ಪರಿಣಾಮಕಾರಿಯಾಗಿದ್ದರಿಂದ ಎದುರಾಳಿ ಆಟಗಾರ್ತಿಯರು ಗೋಲು ಗಳಿಸಲು ನಡೆಸಿದ ಪ್ರಯತ್ನಗಳು ವಿಫಲವಾದವು. ಮೊದಲಾರ್ಧದ ನಂತರ ಕೊರಿಯಾಗೆ ಮೊದಲ ಪೆನಾಲ್ಟಿ ಕಾರ್ನರ್ ಅವಕಾಶ ಸಿಕ್ಕರೂ ಗೋಲಾಗಿ ಪರಿವರ್ತಿಸಲು ಸಾಧ್ಯವಾಗಲಿಲ್ಲ. ಕೆಲವೇ ನಿಮಿಷಗಳ ಬಳಿಕ ಸಂಗೀತಾ ಭಾರತದ ಮುನ್ನಡೆಯನ್ನು ಹೆಚ್ಚಿಸಿದರು. ಬ್ಯೂಟಿ ಡಂಗ್‌ ಡಂಗ್‌ ಅವರು ಚೆಂಡನ್ನು ಗೋಲುಪೆಟ್ಟಿಗೆಗೆ ಸೇರಿಸುವ ಯತ್ನದಲ್ಲಿ ಕೊರಿಯಾ ಗೋಲ್‌ಕೀಪರ್ ಸಮತೋಲನ ತಪ್ಪಿಸಿದರು. ಬಳಿಕ ಚೆಂಡನ್ನು ತಮ್ಮ ವಶಕ್ಕೆ ಪಡೆದ ಸಂಗೀತಾ ಸುಲಭವಾಗಿ ಗೋಲು ಗಳಿಸಿದರು. ತಂಡದ ಸಂಭ್ರಮವನ್ನು ಹೆಚ್ಚಿಸಿದರು. ಭಾನುವಾರ ನಡೆಯುವ ಸೆಮಿಫೈನಲ್ ಪಂದ್ಯದಲ್ಲಿ ಭಾರತಕ್ಕೆ ಮೂರು ಬಾರಿಯ ಚಾಂಪಿಯನ್‌ ನೆದರ್ಲೆಂಡ್ಸ್ ಸವಾಲು ಎದುರಾಗಲಿದೆ. ಎಂಟರಘಟ್ಟದ ಇನ್ನೊಂದು ಪಂದ್ಯದಲ್ಲಿ ನೆದರ್ಲೆಂಡ್ಸ್ 5–0ಯಿಂದ ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.