ಸೆಮಿಫೈನಲ್‌ಗೆ ಕರ್ನಾಟಕ ಪುರುಷರ ತಂಡ ಚೆನ್ನೈ: ಹರೀಶ್ ಎಚ್‌. ಅವರು ಗಳಿಸಿದ 20 ಪಾಯಿಂಟ್ಸ್ ಬಲದಿಂದ ಕರ್ನಾಟಕ ಪುರುಷರ ತಂಡವು ರಾಷ್ಟ್ರೀಯ ಸೀನಿಯರ್ ಬ್ಯಾಸ್ಕೆಟ್‌ಬಾಲ್ ಪಂದ್ಯದಲ್ಲಿ ಜಯ ಗಳಿಸಿತು. ಇದರೊಂದಿಗೆ ಸಮಿಫೈನಲ್‌ ಪ್ರವೇಶಿಸಿತು. ಶುಕ್ರವಾರ ನಡೆದ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಕರ್ನಾಟಕ ತಂಡಕ್ಕೆ 82–65ರಿಂದ ಹರಿಯಾಣ ವಿರುದ್ಧ ಜಯ ಒಲಿಯಿತು. ವಿಜೇತ ತಂಡದ ಪರ ಪ್ರತ್ಯಾಂಶು ತೋಮರ್‌ 14 ಮತ್ತು ಅರವಿಂದ ಡಿ. 11 ಪಾಯಿಂಟ್ಸ್ ಕಲೆಹಾಕಿದರು. ಹರಿಯಾಣ ತಂಡದ ಲಲಿತ್‌ 26 ಪಾಯಿಂಟ್ಸ್ ಗಳಿಸಿದರು. ಮಹಿಳಾ ತಂಡಕ್ಕೆ ಸೋಲು: ಎಂಟರಘಟ್ಟದ ಪಂದ್ಯದಲ್ಲಿ ಕರ್ನಾಟಕ ತಂಡದ ಮಹಿಳೆಯರು 79–83ರಿಂದ ಕೇರಳ ತಂಡದ ಎದುರು ಸೋತರು. ಪಂದ್ಯದ ಮೊದಲ ಕ್ವಾರ್ಟರ್‌ನಲ್ಲಿ ಕೇರಳ 19–14ರಿಂದ ಮುಂದಿತ್ತು. ಆದರೆ ತಿರುಗೇಟು ನೀಡಿದ ಕರ್ನಾಟಕ ಮೂರನೇ ಕ್ವಾರ್ಟರ್‌ನ ಅಂತ್ಯಕ್ಕೆ 62–51ರಿಂದ ಮುಂದಿತ್ತು. ಬಳಿಕ ಕೇರಳ ಮೇಲುಗೈ ಸಾಧಿಸಿತು. ಮತ್ತೊಂದು ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ರೈಲ್ವೇಸ್ ಮಹಿಳಾ ತಂಡವು 94–36ರಿಂದ ಅಸ್ಸಾಂ ವಿರುದ್ಧ ಜಯ ಸಾಧಿಸಿತು. ತೆಲಂಗಾಣ72-64ರಿಂದ ಮಧ್ಯಪ್ರದೇಶ ವಿರುದ್ಧ ಗೆದ್ದಿತು. ಪುರುಷರ ವಿಭಾಗದ ಇನ್ನೊಂದು ಎಂಟರಘಟ್ಟದ ಪಂದ್ಯದಲ್ಲಿ ರೈಲ್ವೇಸ್‌ 90–68ರಿಂದ ಸರ್ವಿಸಸ್‌ ವಿರುದ್ಧ ಜಯಿಸಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.