ಮುಖ್ಯಸ್ಥರ ಬಂಧನಕ್ಕೆ ಆಗ್ರಹ: 'ಕಪ್ಪು ಪಟ್ಟಿ' ಧರಿಸಿ ಪ್ರತಿಭಟಿಸಿದ ಕುಸ್ತಿಪಟುಗಳು ನವದೆಹಲಿ: ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಭಾರತೀಯ ಕುಸ್ತಿ ಫೆಡರೇಷನ್‌ (ಡಬ್ಲ್ಯುಎಫ್‌ಐ) ಮುಖ್ಯಸ್ಥ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳು 'ಕಪ್ಪು ಪಟ್ಟಿ' ಧರಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಬ್ರಿಜ್‌ ಭೂಷಣ್‌ ಅವರನ್ನು ಬಂಧಿಸಬೇಕು ಎಂದು ಬಾಲಕಿಯರೂ ಸೇರಿದಂತೆ ಹಲವು ಮಹಿಳಾ ಕುಸ್ತಿಪಟುಗಳು ಒತ್ತಾಯಿಸಿದ್ದಾರೆ. ಸದ್ಯ ಇಲ್ಲಿನ ಜಂತರ್‌ ಮಂತರ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಯು 18ನೇ ದಿನಕ್ಕೆ ಕಾಲಿಟ್ಟಿದ್ದು, ಇದನ್ನು 'ಕಪ್ಪು ದಿನ' ಎಂದು ಕರೆದಿದ್ದಾರೆ. ವಿನೇಶ್‌ ಪೋಗಟ್‌, ಬಜರಂಗ್‌ ಪೂನಿಯಾ, ಸಾಕ್ಷಿ ಮಲಿಕ್‌, ಸತ್ಯವರ್ತ್‌ ಕೈದಿಯಾನ್‌, ಜಿತೇಂದರ್‌ ಕಿನ್ಹಾ ತಮ್ಮ ಹಣೆಗೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟಿಸಿದರು. ಈ ವೇಳೆ ಸ್ಥಳದಲ್ಲಿದ್ದ ಅವರ ಕೆಲವು ಬೆಂಬಲಿಗರೂ ತೋಳಿಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಬೆಂಬಲ ಸೂಚಿಸಿದರು. ಬಿಜೆಪಿ ಸಂಸದರೂ ಆಗಿರುವ ಬ್ರಿಜ್‌ ಭೂಷಣ್‌ ವಿರುದ್ಧ ಪೋಕ್ಸೊ ಕಾಯ್ದೆಯ ಸೆಕ್ಷನ್‌ 10ರ ಅಡಿಯಲ್ಲಿ ಒಂದು ಸೇರಿ ಒಟ್ಟು ಎರಡು ಎಫ್‌ಐಆರ್‌ಗಳನ್ನು ದೆಹಲಿ ಪೊಲೀಸರು ದಾಖಲಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.