ಒಲಿಂಪಿಕ್ಸ್ ಪದಕ ಮಾರಲಿರುವ ನಿಜೆಲ್ ಅಮೊಸ್ ಲಂಡನ್: ಬೋಟ್ಸವಾನಾದ ಅಥ್ಲೀಟ್ ನಿಜೆಲ್ ಅಮೊಸ್ ಅವರು ತಾವು 2012ರ ಲಂಡನ್ ಒಲಿಂಪಿಕ್ ಕೂಟದಲ್ಲಿ ಜಯಿಸಿದ್ದ ಬೆಳ್ಳಿ ಪದಕವನ್ನು ಮಾರಾಟ ಮಾಡುವುದಾಗಿ ತಿಳಿಸಿದ್ದಾರೆ. ಉದ್ದೀಪನ ಮದ್ದು ಸೇವನೆಯ ಪ್ರಕರಣದಲ್ಲಿ ಅವರಿಗೆ ಮೂರು ವರ್ಷಗಳ ನಿಷೇಧ ಶಿಕ್ಷೆಯನ್ನು ಹೋದವಾರ ಪ್ರಕಟಿಸಲಾಗಿತ್ತು. 29 ವರ್ಷದ ಅಥ್ಲೀಟ್ ಮೂತ್ರದ ಪರೀಕ್ಷೆ ಮಾಡಲಾಗಿತ್ತು. ಅದರಲ್ಲಿ ನಿಷೇಧಿತ ಮದ್ದು ಸೇವನೆ ದೃಢಪಟ್ಟಿತ್ತು. ‘ಸದ್ಯದ ಪರಿಸ್ಥಿತಿಯಲ್ಲಿ ನನಗಿರುವ ಏಕೈಕ ಪಿಂಚಣಿ ಅಥವಾ ಹೂಡಿಕೆಯ ಮೂಲವೆಂದರೆ ಒಲಿಂಪಿಕ್ ಬೆಳ್ಳಿ ಪದಕವವಷ್ಟೇ. ಕೆಲವು ಖರೀದಿದಾರರೊಂದಿಗೆ ಸಂಪರ್ಕದಲ್ಲಿದ್ದೇನೆ. ಅದರಲ್ಲಿ ಹಣಕಾಸು ಸಲಹೆಗಾರರೂ ಇದ್ದಾರೆ. ನನ್ನ ಮತ್ತು ಕುಟುಂಬದ ನಿರ್ವಹಣೆಗಾಗಿ ಈ ಹೆಜ್ಜೆ ಇಡಲೇಬೇಕಾಗಿದೆ. ಅಂದಾಜು ಮೌಲ್ಯ ₹ 2.78 ಕೋಟಿ ಸಿಗಬಹುದು. ಇನ್ನು ಕೆಲದಿನಗಳಲ್ಲಿ ನನ್ನ ಬಯೋಪಿಕ್ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗಲಿದೆ. ಅದರ ನಂತರ ಈ ಮೌಲ್ಯ ದುಪ್ಪಟ್ಟಾಗುವ ಸಾಧ್ಯತೆ ಇದೆ‘ ಎಂದು ಅವರು ಹೇಳಿದ್ದಾರೆ. ಅಮೊಸ್ ಗೆದ್ದ ಬೆಳ್ಳಿಯು ಬೋತ್ಸವಾನಾ ದೇಶಕ್ಕೆ ಲಭಿಸಿದ್ದ ಮೊಟ್ಟಮೊದಲ ಒಲಿಂಪಿಕ್ ಪದಕವಾಗಿತ್ತು. 2021ರ ಟೋಕಿಯೊ ಒಲಿಂಪಿಕ್ ಕೂಟದಲ್ಲಿ ಅಮೊಸ್‌ ಇದ್ದ ತಂಡವು ಪುರುಷರ 4X400 ಮೀ ರಿಲೆಯಲ್ಲಿ ಕಂಚಿನ ಪದಕ ಜಯಿಸಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.