ಗುಕೇಶ್‌ಗೆ ಲಾ ರೋಡಾ ಚೆಸ್ ಪ್ರಶಸ್ತಿ ಕ್ಯಾಸಿಲಾ ಲಾ ಮಾಂಚ, ಸ್ಪೇನ್‌: ಭಾರತದ ಯುವ ಗ್ರ್ಯಾಂಡ್‌ಮಾಸ್ಟರ್ ಡಿ.ಗುಕೇಶ್ ಅವರು ಲಾ ರೊಡಾ ಅಂತರರಾಷ್ಟ್ರೀಯ ಮುಕ್ತ ಚೆಸ್ ಟೂರ್ನಿಯ ಪ್ರಶಸ್ತಿ ಗೆದ್ದುಕೊಂಡರು. ಭಾನುವಾರ ರಾತ್ರಿ ಮುಕ್ತಾಯಗೊಂಡ ಟೂರ್ನಿಯ ಒಂಬತ್ತು ಸುತ್ತುಗಳಲ್ಲಿ ಎಂಟು ಪಾಯಿಂಟ್ ಕಲೆ ಹಾಕುವಲ್ಲಿ ಅವರು ಯಶಸ್ವಿಯಾದರು. ಚೆನ್ನೈನ 15 ವರ್ಷದ ಗುಕೇಶ್ ಎಲ್ಲ ಒಂಬತ್ತು ಸುತ್ತುಗಳಲ್ಲೂ ಆಜೇಯರಾಗಿದ್ದರು. ಕೊನೆಯ ಸುತ್ತಿನಲ್ಲಿ ಇಸ್ರೇಲ್‌ನ ವಿಕ್ಟರ್ ಮಿಖಾಲೆವ್‌ಸ್ಕಿ ಎದುರು ಜಯ ಗಳಿಸಿದರು. ಈ ಮೂಲಕ ಅರ್ಮೇನಿಯದ ಹೈಕ್ ಎಂ ಮಾರ್ಟಿರೊಸ್ಯಾನ್‌ ಅವರಿಗಿಂತ ಸ್ಪಷ್ಟ ಮುನ್ನಡೆ ಸಾಧಿಸಿದರು. ಮಾರ್ಟಿರೊಸ್ಯಾನ್‌ 7.5 ಪಾಯಿಂಟ್ ಕಲೆ ಹಾಕಿದ್ದರು. ಭಾರತದ ಮತ್ತೊಬ್ಬ ಯುವ ಗ್ರ್ಯಾಂಡ್‌ಮಾಸ್ಟರ್ ಆರ್‌.ಪ್ರಗ್ನಾನಂದ 7 ಪಾಯಿಂಟ್‌ಗಳೊಂದಿಗೆ ಮೂರನೇ ಸ್ಥಾನ ಗಳಿಸಿದರು. ರೌನಕ್ ಸಾಧ್ವಾನಿ ಕೂಡ 7 ಪಾಯಿಂಟ್ ಗಳಿಸಿದ್ದರು. ಆದರೆ ಉತ್ತಮ ಟೈ ಬ್ರೇಕ್ ಸ್ಕೋರ್ ಆಧಾರದಲ್ಲಿ ಪ್ರಗ್ನಾನಂದ 3ನೇ ಸ್ಥಾನ ಗಳಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.