ಏಷ್ಯನ್ ಗೇಮ್ಸ್‌: ಆಯ್ಕೆ ಟ್ರಯಲ್ಸ್‌ ಸ್ಪರ್ಧಿಗಳ ಕಳುಹಿಸಲು ರಾಜ್ಯಸಂಸ್ಥೆಗಳಿಗೆ ಅವಕಾಶ ನವದೆಹಲಿ: ಏಷ್ಯನ್‌ ಗೇಮ್ಸ್‌ ಕುಸ್ತಿ ಆಯ್ಕೆ ಟ್ರಯಲ್ಸ್‌ಗೆ ಅರ್ಹ ಕುಸ್ತಿಪಟುಗಳನ್ನು ಕಳುಹಿಸಿಕೊಡಲು ರಾಜ್ಯ ಕುಸ್ತಿ ಸಂಸ್ಥೆಗಳಿಗೆ ಭಾರತ ಒಲಿಂಪಿಕ್‌ ಸಂಸ್ಥೆಯ ಅಡ್‌ ಹಾಕ್‌ ಸಮಿತಿ ಅವಕಾಶ ನೀಡುವ ಸಾಧ್ಯತೆಯಿದೆ. ಈ ಹಿಂದಿನ ಮಾನದಂಡದ ಪ್ರಕಾರ ನಿರ್ದಿಷ್ಟ ಟೂರ್ನಿಗಳಲ್ಲಿ ಪದಕ ಗೆದ್ದ ಕುಸ್ತಿಪಟುಗಳಷ್ಟೇ ಟ್ರಯಲ್ಸ್‌ನಲ್ಲಿ ಭಾಗವಹಿಸಲು ಅರ್ಹರಾಗಿದ್ದರು. ಹೊಸ ಆಯ್ಕೆ ನಿಯಮದ ಪ್ರಕಾರ ಕುಸ್ತಿಪಟುಗಳಿಗೆ, ಇಂಥ ಟೂರ್ನಿಗಳಲ್ಲಿ ಪದಕ ಗೆಲ್ಲದಿದ್ದರೂ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ಅವಕಾಶ ನೀಡಲಾಗಿದೆ. ಜೂನ್‌ ಮೂರನೇ ವಾರ ಏಷ್ಯನ್‌ ಕ್ರೀಡಾಕೂಟಕ್ಕೆ ಆಯ್ಕೆ ಟ್ರಯಲ್ಸ್‌ ನಡೆಯುವ ನಿರೀಕ್ಷೆಯಿದೆ. ಒಂದೆರಡು ದಿನಗಳಲ್ಲಿ ದಿನಾಂಕ ಗೊತ್ತುಪಡಿಸಲಾಗುವುದು. ಏಷ್ಯನ್ ಗೇಮ್ಸ್‌ ಸೆಪ್ಟೆಂಬರ್‌ 23ರಿಂದ ಚೀನಾದ ಹಾಂಗ್‌ಝೌ ನಗರದಲ್ಲಿ ನಡೆಯಲಿದೆ. ಆಯ್ಕೆ ಟ್ರಯಲ್ಸ್‌ಗೆ ಸಂಬಂಧಿಸಿ ಭಾರತ ಕುಸ್ತಿ ಫೆಡರೇಷನ್‌ ಕಳೆದ ವರ್ಷ ನೀತಿ ರೂಪಿಸಿದ್ದು, ಇದರ ಪ್ರಕಾರ ರಾಷ್ಟ್ರೀಯ ಚಾಂಪಿಯನ್‌ಷಿಪ್‌, ರಾಷ್ಟ್ರೀಯ ರ‍್ಯಾಂಕಿಂಗ್ ಟೂರ್ನಿ, ಫೆಡರೇಷನ್ ಕಪ್‌, ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಪದಕ ಗೆದ್ದವರು ಮತ್ತು ಪ್ರತಿಭಾನ್ವಿತ ಕಿರಿಯ ಪೈಲ್ವಾನರು ಟ್ರಯಲ್ಸ್‌ನಲ್ಲಿ ಭಾಗವಹಿಸಲು ಅವಕಾಶವಿತ್ತು. ಆಯ್ಕೆಗೆ ಓಪನ್‌ ಟ್ರಯಲ್ಸ್‌ ನಡೆಸುವ ಬಗ್ಗೆ ಅಡ್‌ ಹಾಕ್‌ ಸಮಿತಿ ಸದಸ್ಯ ಭೂಪೇಂದರ್‌ ಬಾಜ್ವಾ ಒಲವು ವ್ಯಕ್ತಪಡಿಸಿದ್ದರು. ಆದರೆ ಕೋಚ್‌ ಮತ್ತು ರೆಫ್ರಿಗಳು ಪದಕ ಗೆಲ್ಲುವ ಸಂಭವನೀಯರಿಗೆ ಮಾತ್ರ ಟ್ರಯಲ್ಸ್‌ ಸೀಮಿತಗೊಳಿಸುವಂತೆ ಸಲಹೆ ನೀಡಿದರು ಎಂದು ಐಒಎ ಮೂಲಗಳು ತಿಳಿಸಿವೆ. ಓಪನ್ ಟ್ರಯಲ್ಸ್ ನಡೆಸಿದರೆ ನಿಗದಿತ ಅವಧಿಯೊಳಗೆ ಮುಗಿಸಲು ಕಷ್ಟವಾಗಬಹುದು. ಎರಡು ಶೈಲಿಯ (ಫ್ರೀಸ್ಟೈಲ್‌ ಮತ್ತು ಗ್ರಿಕೊ ರೋಮನ್) ಕುಸ್ತಿಗಳ 10 ವಿಭಾಗಗಳಲ್ಲಿ ರಾಜ್ಯ ಸಂಸ್ಥೆಗಳು ತಮ್ಮ ಆಯ್ಕೆಯ ಕುಸ್ತಿಪಟುಗಳನ್ನು ಕಣಕ್ಕಿಳಿಸುವ ಅವಕಾಶ ಇರುವುದರಿಂದ ಟ್ರಯಲ್ಸ್‌ನಲ್ಲಿ ಭಾಗವಹಿಸುವ ಸ್ಪರ್ಧಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಬಹದು. ‘ಅಂತಿಮ ನಿರ್ಧಾರವನ್ನು ಶೀಘ್ರ ಪ್ರಕಟಿಸಲಾಗುವುದು. ಸದ್ಯ 25 ರಾಜ್ಯಗಳು ಕುಸ್ತಿ ಫೆಡರೇಷನ್‌ನ ಮಾನ್ಯತೆ ಪಡೆದಿವೆ. ಸೋಮವಾರ ಈ ಸಂಬಂಧ ನಡೆದ ಸಭೆಯಲ್ಲಿ ಬಾಜ್ವಾ ಜೊತೆ ಕುಸ್ತಿ ಕೋಚ್‌ಗಳು, ರೆಫ್ರಿಗಳು ಮತ್ತು ಭಾರತ ಕ್ರೀಡಾ ಪ್ರಾಧಿಕಾರದ ಅಧಿಕಾರಿಗಳು ಭಾಗವಹಿಸಿದ್ದರು. –––––––––––––––––––––– ಜೊತೆಯಾಗಿ ಶಿಬಿರ ಮಹಿಳಾ ಕುಸ್ತಿಪಟುಗಳ ಪೋಷಕರ ವಿರೋಧ ನವದೆಹಲಿ: ಲಖನೌದ ಭಾರತ ಕ್ರೀಡಾ ಪ್ರಾಧಿಕಾರದ ಕೇಂದ್ರದಲ್ಲಿ ರಾಷ್ಟ್ರೀಯ ಕುಸ್ತಿ ಶಿಬಿರ ನಡೆಸಿದರೆ ಪಾಲ್ಗೊಳ್ಳಲು ತಮಗೆ ಹಿತವೆನಿಸುತ್ತಿಲ್ಲ ಎಂದು ಹಲವು ಮಹಿಳಾ ಪೈಲ್ವಾನರು ಹೇಳಿದ್ದಾರೆ. ಹರಿಯಾಣದ ಸೋನೆಪತ್‌ನಲ್ಲಿ ಪುರುಷರ ಮತ್ತು ಮಹಿಳಾ ಕುಸ್ತಿಪಟುಗಳಿಗೆ ಜೊತೆಯಾಗಿ ಶಿಬಿರ ನಡೆಸುವುದಕ್ಕೆ ಹಲವು ಪೋಷಕರು ಅಸಮ್ಮತಿ ವ್ಯಕ್ತಪಡಿಸಿದ್ದಾರೆ. ಒಂದೇ ಕಡೆ ಶಿಬಿರ ನಡೆಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಸೋನೆಪತ್‌ನಲ್ಲಿ ಪುರುಷರ ಶಿಬಿರದ ಜೊತೆಗೆ ಮಹಿಳಾ ಕುಸ್ತಿಪಟುಗಳಿಗೆ ಶಿಬಿರ ನಡೆಸುವ ಬಗ್ಗೆ ಮಹಿಳಾ ಕುಸ್ತಿಪಟುಗಳ ಪೋಷಕರು ವಿರೋಧ ಇದ್ದಾರೆ ಎಂದು ಮೂಲಗಳು ತಿಳಿಸಿವೆ. ಹೀಗೆ ಶಿಬಿರ ನಡೆಸಿದರೆ ‘ಪ್ರೇಮ ಪ್ರಕರಣ’ಗಳು ಹೆಚ್ಚಬಹುದು ಎಂಬುದು ಪೋಷಕರ ಆತಂಕ. ದೆಹಲಿಯ ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ ಶಿಬಿರ ನಡೆಸುವುದಕ್ಕೆ ಮಹಿಳಾ ಕುಸ್ತಿಪಟುಗಳ ಒಲವಿದೆ. ಆದರೆ ಅಲ್ಲಿ ಹಾಸ್ಟೆಲ್‌ ವ್ಯವಸ್ಥೆಯಿಲ್ಲ. ಪಾಟಿಯಾಲದ ಕ್ರೀಡಾ ಪ್ರಾಧಿಕಾರ ಕೇಂದ್ರವು ಕುಸ್ತಿ ಹಾಲ್‌ ಹೊಂದಿಲ್ಲ. ಈ ಹಿಂದೆ ಇದ್ದುದನ್ನು ವೇಟ್‌ಲಿಫ್ಟಿಂಗ್‌ ಹಾಲ್‌ ಜೊತೆ ಸೇರಿಸಲಾಗಿದೆ. ಗುಜರಾತ್‌ನ ಗಾಂಧಿನಗರದಲ್ಲಿ ಮಹಿಳೆಯರಿಗೆ ರಾಷ್ಟ್ರೀಯ ಶಿಬಿರ ನಡೆಸಲು ಅವಕಾಶವಿದೆ. ಆದರೆ ಕುಸ್ತಿಪಟುಗಳು ಅಲ್ಲಿಗೆ ಹೋಗಲು ಸಮ್ಮತಿಸುವ ಬಗ್ಗೆ ಸಂದೇಹವಿದೆ ಎಂದು ಮೂಲವೊಂದು ತಿಳಿಸಿದೆ. ಪುರುಷ ಕುಸ್ತಿಪಟುಗಳಿಗೆ ಲಖನೌದಲ್ಲಿ ಮತ್ತು ಮಹಿಳಾ ಸ್ಪರ್ಧಿಗಳಿಗೆ ಸೋನೆಪತ್‌ನಲ್ಲಿ ಶಿಬಿರ ನಡೆಸುವ ಯೋಚನೆಯೂ ಮೂಡಿತ್ತು. ಆದರೆ ಕೋಚ್‌ ಮತ್ತು ರೆಫ್ರಿಗಳು ಅದಕ್ಕೆ ಒಪ್ಪಿಲ್ಲ ಎನ್ನಲಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.