ಬೆಂಗಳೂರು ವಿಶ್ವ 10ಕೆ: ಜಸ್ಟಿನ್ ಗ್ಯಾಟ್ಲಿನ್ ರಾಯಭಾರಿ ಬೆಂಗಳೂರು:ಟಾಟಾ ಕನ್ಸಲ್ಟನ್ಸಿ ಸರ್ವಿಸಸ್ ವಿಶ್ವಬೆಂಗಳೂರು 10ಕೆಗೆ ರಾಯಭಾರಿಯನ್ನಾಗಿ ಒಲಿಂಪಿಕ್ ಚಿನ್ನದ ಪದಕ ವಿಜೇತ, ಅಮೆರಿಕದ ಅಥ್ಲೀಟ್‌ ಜಸ್ಟಿನ್ ಗ್ಯಾಟ್ಲಿನ್ ಅವರನ್ನು ನೇಮಕ ಮಾಡಲಾಗಿದೆ. 2004ರ ಒಲಿಂಪಿಕ್ಸ್‌ನ 100 ಮೀಟರ್ಸ್‌ ಓಟದಲ್ಲಿ ಚಿನ್ನದ ಪದಕ ಜಯಿಸಿರುವ ಗ್ಯಾಟ್ಲಿನ್‌, ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ನಾಲ್ಕು ಬಾರಿ ಅಗ್ರಸ್ಥಾನ ಗಳಿಸಿದ್ದಾರೆ. ಅವರನ್ನು ಮೇ 15ರಂದು ನಡೆಯುವ 10ಕೆಗೆ ರಾಯಭಾರಿಯನ್ನಾಗಿ ನೇಮಿಸಲಾಗಿದೆ ಎಂದು ಸ್ಪರ್ಧೆಯ ಪ್ರಾಯೋಜಿಸುವ ಸಂಸ್ಥೆ ಪ್ರೊಕ್ಯಾಮ್ ಇಂಟರ್‌ನ್ಯಾಷನಲ್ ಮಂಗಳವಾರ ಪ್ರಕಟಿಸಿದೆ. 2003ರಿಂದ 2019ರ ಅವಧಿಯಲ್ಲಿ ವಿಶ್ವ ಅಥ್ಲೆಟಿಕ್ಸ್‌ನಲ್ಲಿ ಛಾಪು ಮೂಡಿಸಿದ್ದ ಗ್ಯಾಟ್ಲಿನ್‌, ಈ ವರ್ಷದ ಫೆಬ್ರುವರಿಯಲ್ಲಿ ನಿವೃತ್ತಿ ಪ್ರಕಟಿಸಿದ್ದರು. ಅಂತರರಾಷ್ಟ್ರೀಯ ಅಥ್ಲೆಟಿಕ್ಸ್‌ನಲ್ಲಿ 15ಕ್ಕೂ ಹೆಚ್ಚು ಪದಕಗಳು ಅವರ ಮುಡಿಗೇರಿವೆ. ‘ಕಳೆದ ಎರಡು ವರ್ಷಗಳು ನಮಗೆಲ್ಲರಿಗೂ ಸವಾಲಾಗಿತ್ತು ಮತ್ತು ಒಟ್ಟಿಗೆ ಇರುವುದರ ಮಹತ್ವ ಅರಿವಾಗಿದೆ. ಬೆಂಗಳೂರು ವಿಶ್ವ 10ಕೆ ಭಾಗವಾಗಲು ಉತ್ಸುಕನಾಗಿದ್ದೇನೆ‘ ಎಂದು ಗ್ಯಾಟ್ಲಿನ್ ಹೇಳಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.