ಮೆಸ್ಸಿ, ಫ್ರೇಸರ್‌ ಪ್ರೈಸ್‌ಗೆ ಲಾರಿಯಸ್‌ ಗೌರವ ಪ್ಯಾರಿಸ್‌: ಅರ್ಜೆಂಟೀನಾದ ಫುಟ್‌ಬಾಲ್‌ ಅಟಗಾರ ಲಯೊನೆಲ್‌ ಮೆಸ್ಸಿ ಅವರು ಪ್ರತಿಷ್ಠಿತ ‘ಲಾರಿಯಸ್‌ ವರ್ಷದ ಕ್ರೀಡಾಪಟು’ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮಹಿಳೆಯರ ವಿಭಾಗದಲ್ಲಿ ಈ ಗೌರವ ಜಮೈಕದ ವೇಗದ ಓಟಗಾರ್ತಿ ಶೆಲ್ಲಿ ಆ್ಯನ್‌ ಫ್ರೇಸರ್‌ ಪ್ರೈಸ್‌ ಅವರಿಗೆ ಒಲಿದಿದೆ. 2022 ರಲ್ಲಿ ತೋರಿದ ಸಾಧನೆಯನ್ನು ಗುರುತಿಸಿ ಇಬ್ಬರನ್ನೂ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ಯಾರಿಸ್‌ನಲ್ಲಿ ಸೋಮವಾರ ರಾತ್ರಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡ 2022 ರಲ್ಲಿ ಫಿಫಾ ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿಯನ್ನು ಗೆದ್ದುಕೊಂಡಿತ್ತು. ಮೆಸ್ಸಿ ಅವರು 2020 ರಲ್ಲಿ ಫಾರ್ಮುಲಾ 1 ಚಾಲಕ ಲೆವಿಸ್‌ ಹ್ಯಾಮಿಲ್ಟನ್‌ ಅವರೊಂದಿಗೆ ಜಂಟಿಯಾಗಿ ಈ ಗೌರವ ಪಡೆದುಕೊಂಡಿದ್ದರು. ಶೆಲ್ಲಿ ಅವರು 2022ರ ವಿಶ್ವ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ನ 100 ಮೀ. ಓಟದಲ್ಲಿ ಚಿನ್ನ ಗೆದ್ದಿದ್ದರಲ್ಲದೆ, ಐದನೇ ಬಾರಿ ಈ ಸಾಧನೆ ಮಾಡಿದ್ದರು. ಸ್ಪೇನ್‌ನ ಯುವ ಟೆನಿಸ್ ಆಟಗಾರ ಕಾರ್ಲೊಸ್‌ ಅಲ್ಕರಾಜ್‌ ಅವರು ‘ಬ್ರೇಕ್‌ಥ್ರೂ ಆಫ್‌ ದಿ ಇಯರ್‌’ ಗೌರವಕ್ಕೆ ಪಾತ್ರರಾದರು. ಕಳೆದ ವರ್ಷ ಅಮೆರಿಕ ಓಪನ್‌ ಟೂರ್ನಿ ಗೆದ್ದಿದ್ದ ಅವರು ವಿಶ್ವ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.