ವಿಶೇಷ ಒಲಿಂಪಿಕ್ಸ್‌: ಭಾರತಕ್ಕೆ 202 ಪದಕ ಬರ್ಲಿನ್‌: ಭಾರತ ತಂಡವು, ಭಾನುವಾರ ಇಲ್ಲಿ ಮುಕ್ತಾಯಗೊಂಡ ವಿಶೇಷ ಒಲಿಂಪಿಕ್ಸ್‌ನಲ್ಲಿ 76 ಚಿನ್ನ ಸೇರಿದಂತೆ 202 ಪದಕಗಳನ್ನು ಗಳಿಸಿ ಅಮೋಘ ಸಾಧನೆ ಪ್ರದರ್ಶಿಸಿದೆ. ಇದರಲ್ಲಿ 75 ಬೆಳ್ಳಿ, 51 ಕಂಚಿನ ಪದಕಗಳೂ ಸೇರಿವೆ. ಕೊನೆಯ ದಿನ ನಡೆದ ಅಥ್ಲೆಟಿಕ್ಸ್‌ನಲ್ಲಿ ಭಾರತೀಯ ಅಥ್ಲೀಟ್‌ಗಳು ಎರಡು ಚಿನ್ನ, ಮೂರು ಬೆಳ್ಳಿ, ಒಂದು ಕಂಚು ಗೆದ್ದರು. ಆಂಚಲ್ ಗೋಯಲ್ (400 ಮೀ, ಬಿ ಹಂತ) ಮತ್ತು ರವಿಮತಿ ಅರ್ಮುಗಂ (400 ಮೀ, ಸಿ ಹಂತ) ಅಗ್ರಸ್ಥಾನದೊಂದಿಗೆ ಚಿನ್ನಕ್ಕೆ ಮುತ್ತಿಟ್ಟರು. ಮಿನಿ ಜಾವೆಲಿನ್‌ನಲ್ಲಿ ಈ ಹಿಂದೆ ಬೆಳ್ಳಿ ಪದಕ ಗೆದ್ದಿದ್ದ ಸಾಕೇತ್ ಕುಂದು, 400 ಮೀ. ಓಟದಲ್ಲಿ ಕಂಚಿನ ಪದಕ ಗೆದ್ದರು. ಟೇಬಲ್‌ ಟೆನಿಸ್‌ನ ಮಹಿಳೆಯ ಡಬಲ್ಸ್‌ನಲ್ಲಿ ಅಲವೇಲಮ್ಮ ಮತ್ತು ಗಾಯತ್ರಿ, ಪುರುಷರ ಡಬಲ್ಸ್‌ನಲ್ಲಿ ವಿಘ್ನೇಶ್‌ ಮತ್ತು ಪ್ರತೀಕ್‌, ಮಹಿಳಾ ಸಿಂಗಲ್ಸ್‌ನಲ್ಲಿ ಅಲವೇಲಮ್ಮ, ಪುರುಷರ ಸಿಂಗಲ್ಸ್‌ನಲ್ಲಿ ವಿಘ್ನೇಶ್‌ ಚಿನ್ನದ ಪದಕ ಗೆದ್ದರು. ಭಾರತೀಯ ಕ್ರೀಡಾಪಟುಗಳು ಪ್ರದರ್ಶನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ವಿಶೇಷ ಒಲಿಂಪಿಕ್ಸ್ ಭಾರತ್‌ನ ಅಧ್ಯಕ್ಷೆ ಮಲ್ಲಿಕಾ ನಾಡಾ, ‘‌ಕ್ರೀಡೆಗಳಲ್ಲಿ ಅವರ ಸಾಮರ್ಥ್ಯ ಅಸಾಮಾನ್ಯವಾದುದು. ಅವರು ತಮ್ಮ ಸಾಹಸ, ವೇಗ, ಶಿಸ್ತು, ಏಕಾಗ್ರತೆಯನ್ನು ಸಾಬೀತು ಮಾಡಿದ್ದಾರೆ. ಇದು ಎಲ್ಲರಿಗೂ ಮಾದರಿಯಾಗಿದೆ. ನಾವು ಈ ಆಂದೋಲನವನ್ನು ಮತ್ತಷ್ಟು ವಿಸ್ತರಿಸಬೇಕು’ ಎಂದು ಹೇಳಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.