ಆರ್ಯ ಗಣಪತಿಗೆ ‘ಡಬಲ್’ ಸಂಭ್ರಮ ಬೆಂಗಳೂರು: ಅಗ್ರ ಶ್ರೇಯಾಂಕದ ಮನದೀಪ್ ರೆಡ್ಡಿ ಕುಡುಮಲ ವಿರುದ್ಧ ಅಮೋಘ ಆಟವಾಡಿದ ಆರ್ಯ ಗಣಪತಿ ಕಲ್ಲಂಬೆಲ್ಲ ಅವರು ಎಐಟಿಎ ಆಯೋಜಿಸಿರುವ ಎಸ್‌ಎಟಿ ಸ್ಪೋರ್ಟ್ಸ್‌ನ 18 ವರ್ಷದೊಳಗಿನವರ ಸಿಎಸ್‌ 7 ಟೆನಿಸ್ ಟೂರ್ನಿಯ ಬಾಲಕರ ವಿಭಾಗದ ಫೈನಲ್ ಪ್ರವೇಶಿಸಿದರು. ಕರ್ನಾಟಕ ರಾಜ್ಯ ಟೆನಿಸ್ ಅಂಗಣದಲ್ಲಿ ಗುರುವಾರ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಆರ್ಯ ಗಣಪತಿ 6-4, 6-2ರಲ್ಲಿ ಜಯ ಗಳಿಸಿದರು. ನಂತರ ಬಾಲಕರ ಡಬಲ್ಸ್ ವಿಭಾಗದ ಪ್ರಶಸ್ತಿ ಗೆದ್ದು ಸಂಭ್ರಮಿಸಿದರು. 18 ವರ್ಷದ ಆರ್ಯ, ತಮಿಳುನಾಡಿನ ಕಂದವೇಲ್‌ ಜೊತೆಗೂಡಿ ಫೈನಲ್ ಪಂದ್ಯದಲ್ಲಿ ತೆಲಂಗಾಣದ ಜೋಡಿ ಶ್ರೀ ಶರಣ್ ಮತ್ತು ಆರ್ಯಾಂತ್ ಚಿಂತರಪಲ್ಲಿ ಎದುರು 6-2, 7-6 (2)ರಲ್ಲಿ ಗೆಲುವು ಸಾಧಿಸಿದರು. ಸಿಂಗಲ್ಸ್ ವಿಭಾಗದ ಫೈನಲ್‌ನಲ್ಲಿ ಅರ್ಯ ಮತ್ತು ಕಂದವೇಲ್ ಶುಕ್ರವಾರ ಮುಖಾಮುಖಿಯಾಗುವರು. ಆರಾಧ್ಯ ದ್ವಿವೇದಿ ಎದುರು 6-1, 6-3ರಲ್ಲಿ ಜಯ ಗಳಿಸಿ ಕಂದವೇಲ್ ಪ್ರಶಸ್ತಿ ಸುತ್ತು ಪ್ರವೇಶಿಸಿದ್ದಾರೆ. ಬಾಲಕಿಯರ ವಿಭಾಗದಲ್ಲಿ ಮೇಘನಾ ಜಿ.ಡಿ ಮತ್ತು ಆಮೋದಿನಿ ವಿ.ನಾಯಕ್ ಚಾಂಪಿಯನ್ ಪಟ್ಟಕ್ಕಾಗಿ ಸೆಣಸುವರು. ನಾಲ್ಕರ ಘಟ್ಟದ ಪಂದ್ಯದಲ್ಲಿ ಮೇಘನಾ 6-0, 6-3ರಲ್ಲಿ ವಾರುಣ್ಯ ನವೀನ್ ವಿರುದ್ಧ ಜಯ ಗಳಿಸಿದರು. ಸುಶ್ಮಿತಾ ರವಿ ವಿರುದ್ಧ 6-4, 6-3ರಲ್ಲಿ ಆಮೋದಿನಿ ಗೆದ್ದರು. ಬಾಲಕಿಯರ ಡಬಲ್ಸ್ ವಿಭಾಗದ ಪ್ರಶಸ್ತಿ ಜೆನಿಫರ್ ಚಾಕೊ ಮತ್ತು ಚಾರ್ಮಿ ಗೋಪಿನಾಥ್ ಅವರ ಪಾಲಾಯಿತು. ಫೈನಲ್‌ನಲ್ಲಿ ಅವರು ದಿಶಾ ಬೆಹರಾ ಮತ್ತು ಸುಶ್ಮಿತಾ ದೇವಿ ವಿರುದ್ಧ 6-1, 2-6, 10-8ರಲ್ಲಿ ಜಯ ಗಳಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.