ವಿಶ್ವ ವಿವಿ ಕ್ರೀಡಾಕೂಟ: ಆತಿಥ್ಯಕ್ಕೆ ಜೈನ್ ವಿಶ್ವವಿದ್ಯಾಲಯ ಸಜ್ಜು ಬೆಂಗಳೂರು: ಕನಕಪುರ ರಸ್ತೆಯಲ್ಲಿರುವ ಜೈನ್ ವಿಶ್ವವಿದ್ಯಾಲಯದ ಆವರಣಕ್ಕೆ ಈಗ ಹೊಸ ಕಳೆ ಬಂದಿದೆ. ಖೇಲೊ ಇಂಡಿಯಾ ವಿಶ್ವವಿದ್ಯಾಲಯ ಕೂಟದ ಸ್ಪರ್ಧೆಗಳನ್ನು ಆಯೋಜಿಸಲು ಅಂತಿಮ ಹಂತದ ತಯಾರಿ ಭರದಿಂದ ಸಾಗಿದೆ. ಇದೇ 24ರಿಂದ ಮೇ 3ರವರೆಗೆ ನಗರದಲ್ಲಿ ಕೂಟವು ನಡೆಯಲಿದೆ. ಜೈನ್ ವಿಶ್ವವಿದ್ಯಾಲಯವು 16 ಕ್ರೀಡೆಗಳಿಗೆ ಆತಿಥ್ಯ ವಹಿಸಲಿದೆ. ಉಳಿದ 4 ಕ್ರೀಡೆಗಳ ಸ್ಪರ್ಧೆಗಳು ಕಂಠೀರವ ಕ್ರೀಡಾಂಗಣ, ಸಾಯ್ ಶೂಟಿಂಗ್ ರೇಂಜ್ ಮತ್ತು ಹಾಕಿ ಮೈದಾನದಲ್ಲಿ ನಡೆಯಲಿವೆ. ಈ ಕುರಿತು ಮಾಹಿತಿ ನೀಡಿದ ಜೈನ್ ವಿವಿಯ ನಿರ್ದೇಶಕ ಯ.ವಿ. ಶಂಕರ್, ‘ದೇಶದ 200 ವಿವಿಗಳಿಂದ 4500 ಸ್ಪರ್ಧಿಗಳು ಇಲ್ಲಿಗೆ ಬರಲಿದ್ದಾರೆ. ಹತ್ತು ದಿನಗಳ ಕೂಟ ಇದಾಗಿದೆ. ಇಲ್ಲಿ ವಿಜೇತರಾದವರಿಗೆ ಇದೇ ವರ್ಷ ಚೀನಾದಲ್ಲಿ ನಡೆಯಲಿರುವ ವಿಶ್ವ ಯುನಿವರ್ಸಿಟಿ ಗೇಮ್ಸ್‌ಗೆ ಅರ್ಹತೆ ಸಿಗಲಿದೆ’ ಎಂದರು. ‘ಜೂನ್‌–ಜುಲೈನಲ್ಲಿ ಕೂಟ ನಡೆಯಲಿದೆ. ಆದರೆ, ಚೀನಾದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ವರದಿಗಳಿವೆ. ಮುಂದಿನ ಬದಲಾ ವಣೆಗಳ ಬಗ್ಗೆ ಮಾಹಿತಿ ಇಲ್ಲ’ ಎಂದರು. ‘ಕೂಟದಲ್ಲಿ ಭಾಗವಹಿಸುವ ಸ್ಪರ್ಧಿಗಳು ಮತ್ತಿತರರು ಕೋವಿಡ್ ಲಸಿಕೆಯ ಎರಡು ಡೋಸ್ ಪಡೆದಿರುವುದು ಕಡ್ಡಾಯ. ಉಳಿದಂತೆ ರಾಜ್ಯ ಸರ್ಕಾರದ ಮಾರ್ಗಸೂಚಿಯನ್ನು ಪಾಲಿಸಲಾಗುವುದು. ಕೋವಿಡ್ ಪತ್ತೆ, ಚಿಕಿತ್ಸೆಗೆ ಪರಿಣತ ವೈದ್ಯರ ತಂಡ, ಐಸೋಲೆಷನ್ ಕೋಣೆಗಳ ವ್ಯವಸ್ಥೆ ಮಾಡಲಾಗಿದೆ. ಕ್ರೀಡಾಕೂಟಕ್ಕೆ ಬ್ಯಾಟರಿಚಾಲಿತ ಬಸ್‌ ಸೌಲಭ್ಯವನ್ನು ಬಿಎಂಟಿಸಿಯಿಂದ ಪಡೆಯುವ ಯೋಜನೆಯಿತ್ತು. ಆದರೆ ಸ್ಪರ್ಧೆಗಳು ನಡೆಯುವ ಕ್ರೀಡಾಂಗಣಗಳ ನಡುವೆ ಹಾಗೂ ವಿಮಾನನಿಲ್ದಾಣದಿಂದ ವಿಶ್ವವಿದ್ಯಾಲಯಕ್ಕೆ ಬಸ್‌ಗಳ ಓಡಾಟವನ್ನು ಕೈಬಿಡಲಾಗಿದೆ. ಈ ತಾಣಗಳಲ್ಲಿ ಬ್ಯಾಟರಿ ರಿಚಾರ್ಜ್ ಸೌಲಭ್ಯಗಳಿಲ್ಲದಿರುವುದೇ ಅದಕ್ಕೆ ಕಾರಣ. ಆದರೆ, ವಿವಿಯ ಆವರಣದೊಳಗೆ ಬ್ಯಾಟರಿಚಾಲಿತ ವಾಹನ ವ್ಯವಸ್ಥೆ ಮಾಡಲಾಗುತ್ತಿದೆ. ಪರಿಸರಸ್ನೇಹಿ ಕ್ರೀಡಾಕೂಟದಂಗವಾಗಿ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸುವ ಯೋಜನೆಯಿದೆ. ಆದರೆ ನಾಡಾ ಉದ್ದೀಪನ ಮದ್ದು ಪರೀಕ್ಷೆ ನಡೆಸುವ ಸಂದರ್ಭದಲ್ಲಿ ನೀರಿನ ಬಾಟಲಿಗಳನ್ನು ಒದಗಿಸಲು ಹೇಳಿದೆ. ಆ ವಿಷಯದ ಕುರಿತು ಚರ್ಚೆ ನಡೆಯುತ್ತಿದೆ’ ಎಂದರು. ಆಳ್ವಾಸ್‌ನ 71 ಮಂದಿ ಆಯ್ಕೆ ಮೂಡುಬಿದಿರೆ: ‘ಬೆಂಗಳೂರಿನಲ್ಲಿ ನಡೆಯಲಿರುವ ಖೇಲೊ ಇಂಡಿಯಾ ವಿಶ್ವವಿದ್ಯಾಲಯಗಳ ಕ್ರೀಡಾಕೂಟಕ್ಕೆ ಆಳ್ವಾಸ್ ಕಾಲೇಜಿನಿಂದ 71 ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆ’ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ತಿಳಿಸಿದರು. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘ಈ ಬಾರಿಯ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಕ್ರೀಡಾಕೂಟಗಳಲ್ಲಿ ಮಂಗಳೂರು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿ, ಸಾಧನೆ ಮೆರೆದ ಕ್ರೀಡಾಪಟುಗಳು ಖೇಲೊ ಇಂಡಿಯಾ ಕ್ರೀಡಾಕೂಟಕ್ಕೆ ಅರ್ಹತೆ ಪಡೆದಿದ್ದಾರೆ. ಅಥ್ಲೆಟಿಕ್ಸ್‌ನಲ್ಲಿ ಒಟ್ಟು 41 ಮಂದಿ, ಪುರುಷರ ವಾಲಿಬಾಲ್‌ನಲ್ಲಿ 7, ಮಹಿಳೆಯರ ವಿಭಾಗದ; ಕಬಡ್ಡಿಯಲ್ಲಿ 9, ಹಾಕಿಯಲ್ಲಿ 3, ವೇಟ್‌ ಲಿಫ್ಟಿಂಗ್‌ನಲ್ಲಿ 3 ಹಾಗೂ ಕುಸ್ತಿಯಲ್ಲಿ ಇಬ್ಬರು ಭಾಗವಹಿಸಲಿದ್ದಾರೆ’ ಎಂದು ಹೇಳಿದರು. ‘ಹೊಸದಾಗಿ ಸೇರ್ಪಡೆಗೊಂಡ ದೇಸಿ ಕ್ರೀಡೆ ಮಲ್ಲಕಂಬದಲ್ಲಿ ಮಂಗಳೂರು ವಿಶ್ವವಿದ್ಯಾಲಯವು ಕರ್ನಾಟಕ ರಾಜ್ಯದಿಂದ ಆಯ್ಕೆಯಾದ ಏಕೈಕ ವಿಶ್ವವಿದ್ಯಾಲಯವಾಗಿದೆ. ಈ ತಂಡವನ್ನು ಪ್ರತಿನಿಧಿಸಲಿರುವ ಎಲ್ಲ ಆರು ಕ್ರೀಡಾಪಟುಗಳು ಆಳ್ವಾಸ್ ಕಾಲೇಜಿನವರಾಗಿದ್ದಾರೆ. ಒಡಿಶಾದ ಕಳಿಂಗ ವಿವಿಯಲ್ಲಿ ನಡೆದ ಮೊದಲನೇ ಆವೃತ್ತಿಯ ಕ್ರೀಡಾಕೂಟದಲ್ಲಿ ಮಂಗಳೂರು ವಿಶ್ವವಿದ್ಯಾಲಯ ಪುರುಷರ ಹಾಗೂ ಮಹಿಳೆಯರ ವಿಭಾಗದ ಎರಡೂ ತಂಡ ಪ್ರಶಸ್ತಿಯನ್ನು ಗಳಿಸಿತ್ತು’ ಎಂದು ಮೋಹನ ಆಳ್ವ ಹೇಳಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.