- : ವಿಂಬಲ್ಡನ್‌ನಿಂದ ರಷ್ಯಾ, ಬೆಲಾರೂಸ್ ಆಟಗಾರರಿಗೆ ನಿಷೇಧ ಲಂಡನ್: ರಷ್ಯಾ ಹಾಗೂ ಬೆಲಾರೂಸ್ ದೇಶಗಳ ಆಟಗಾರರನ್ನು ಈ ಬಾರಿಯ ವಿಂಬಲ್ಡನ್‌ ಟೆನಿಸ್ ಟೂರ್ನಿಯಲ್ಲಿ ಆಡದಂತೆ ನಿಷೇಧಿಸಲಾಗಿದೆ. ಫೆಬ್ರುವರಿ 24ರಿಂದ ಉಕ್ರೇನ್ ಮೇಲೆ ರಷ್ಯಾ ಯುದ್ಧ ನಡೆಸುತ್ತಿದೆ. ಬೆಲಾರೂಸ್ ಬೆಂಬಲ ನೀಡಿದೆ. ಆದ್ದರಿಂದ ವಿವಿಧ ಕ್ರೀಡಾಕೂಟಗಳಲ್ಲಿ ಎರಡೂ ದೇಶಗಳ ಆಟಗಾರರನ್ನು ನಿಷೇಧಿಸಲಾಗಿದೆ. ಆದರೆ ಅವರು ಐಒಸಿ ಧ್ವಜದಡಿಯಲ್ಲಿ ಸ್ಪರ್ಧಿಸಬಹುದಾಗಿದೆ. ವಿಂಬಲ್ಡನ್ ಆಯೋಜಕರ ಈ ನಿರ್ಣಯದಿಂದಾಗಿ ಅಗ್ರಶ್ರೇಯಾಂಕದ ಟೆನಿಸ್ ಆಟಗಾರ ಡ್ಯಾನಿಲ್ ಮೆಡ್ವೆಡೆವ್ ಸ್ಪರ್ಧಿಸುವುದು ಅನುಮಾನವಾಗಿದೆ ಎಂದೂ ಟೈಮ್ಸ್‌ ವರದಿ ಮಾಡಿದೆ. ಮಹಿಳೆಯರ ವಿಭಾಗದಲ್ಲಿ ಹೋದ ಸಲ ಸೆಮಿಫೈನಲ್‌ ಪ್ರವೇಶಿಸಿದ್ದ ಬೆಲಾರೂಸ್‌ನ ಅರ್ಯಾನಾ ಸಬಲೆಂಕಾ ಕೂಡ ಈ ಟೂರ್ನಿಯನ್ನು ತಪ್ಪಿಸಕೊಳ್ಳಲಿದ್ದಾರೆ. ಈಚೆಗೆ ನಡೆದ ಡೇವಿಸ್ ಕಪ್ ಮತ್ತು ಬಿಲಿ ಜೀನ್ ಕಿಂಗ್ ಕಪ್ ಟೂರ್ನಿಗಳಲ್ಲಿಯೂ ಈ ಎರಡೂ ದೇಶಗಳ ಆಟಗಾರರನ್ನು ಐಟಿಎಫ್‌ನಿಷೇಧಿಸಿತ್ತು. ಕ್ರೆಮ್ಲಿನ್ ವಿರೋಧ: ವಿಂಬಲ್ಡನ್‌ ಟೆನಿಸ್ ಟೂರ್ನಿಯಿಂದ ತಮ್ಮ ಹಾಗೂ ಬೆಲಾರೂಸ್ ಆಟಗಾರರನ್ನು ನಿಷೇಧಿಸಿರುವುದನ್ನು ರಷ್ಯಾ ಖಂಡಿಸಿದೆ. ‘ಇದು ಖಂಡಿತವಾಗಿಯೂ ಸ್ವೀಕಾರಾರ್ಹವಲ್ಲ’ ಎಂದು ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೊವಾ ವರದಿಗಾರರಿಗೆ ಹೇಳಿದ್ದಾರೆ. ‘ಮತ್ತೊಮ್ಮೆ ಅಥ್ಲೀಟ್‌ಗಳನ್ನು ಒತ್ತೆಯಾಳುಗಳಂತೆ ನಡೆಸಿಕೊಳ್ಳಲಾಗುತ್ತಿದೆ. ರಾಜಕೀಯ ಪೂರ್ವಗ್ರಹ ಮತ್ತು ಹತಾಶೆ ಇಲ್ಲಿ ಕಾಣುತ್ತಿದೆ’ ಎಂದು ಡಿಮಿಟ್ರಿ ಕುಟುಕಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.