ಕೆಐಯುಜಿಗೆ ಮೆರಗು ತುಂಬಲಿರುವ ಒಲಿಂಪಿಯನ್ನರು ನವದೆಹಲಿ: ಉದ್ಯಾನನಗರಿ ಬೆಂಗಳೂರಿನಲ್ಲಿ ಇದೇ 24ರಿಂದ ಮೇ 3ರವರೆಗೆ ನಡೆಯಲಿರುವ ಖೇಲೊ ಇಂಡಿಯಾ ವಿಶ್ವವಿದ್ಯಾಲಯಗಳ ಕ್ರೀಡಾಕೂಟಕ್ಕೆ (ಕೆಐಯುಜಿ) ಒಲಿಂಪಿಯನ್ ಅಥ್ಲೀಟ್‌ಗಳು ಮೆರಗು ತುಂಬಲಿದ್ದಾರೆ. ಶೂಟರ್‌ ಮನು ಭಾಕರ್, ವೇಗದ ಓಟಗಾರ್ತಿ ದ್ಯುತಿ ಚಾಂದ್‌ ಮತ್ತು ಈಜು ಪಟು ಶ್ರೀಹರಿ ನಟರಾಜ್ ಸ್ಪರ್ಧಿಸಲಿದ್ದಾರೆ. ಶೂಟರ್‌ಗಳಾದ ದಿವ್ಯಾಂಶ್‌ ಸಿಂಗ್ ಪನ್ವರ್‌ ಮತ್ತು ಐಶ್ವರ್ಯಪ್ರತಾಪ್‌ ಸಿಂಗ್ ತೋಮರ್ ಕೂಡ ಪದಕ ಬೇಟೆಗೆ ಸಜ್ಜಾಗಿದ್ದಾರೆ. ‘ಅತ್ಯಾಧುನಿಕ ಸೌಲಭ್ಯಗಳುಳ್ಳ ತಾಣದಲ್ಲಿ ಕ್ರೀಡಾಕೂಟ ನಡೆಯಲಿದ್ದು, ದೊಡ್ಡ ಸಂಖ್ಯೆಯಲ್ಲಿ ಅಥ್ಲೀಟ್‌ಗಳು ಭಾಗವಹಿಸಲಿದ್ದಾರೆ. ಇದು ದೇಶದ ಅತಿ ದೊಡ್ಡ ವಿಶ್ವವಿದ್ಯಾಲಯ ಮಟ್ಟದ ಕ್ರೀಡಾಕೂಟವಾಗಲಿದೆ‘ ಎಂದು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ‘ಖೇಲೊ ಇಂಡಿಯಾ ವಿವಿ ಕೂಟದ ಮೂಲಕ ಇನ್ನಷ್ಟು ಚಾಂಪಿಯನ್‌ಗಳು ಹೊರಹೊಮ್ಮಲಿದ್ದಾರೆ‘ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ‘ಡೋಪಿಂಗ್‌ ತಡೆಗೆ ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕವು (ನಾಡಾ) ಜಾಗೃತಿ ನಡೆಸಲಿದೆ. ಮಾಹಿತಿ, ಶಿಕ್ಷಣ, ಸಂವಹನ ಈ ಎಲ್ಲ ವಿಷಯಗಳಲ್ಲಿ ನಾಡಾದ ಕಾರ್ಯಚಟುವಟಕೆಗಳು ಡಿಜಿಟಲ್ ಆಗಿರಲಿವೆ. ಸಚಿವಾಲಯವುಕ್ರೀಡಾಕೂಟಕ್ಕೆ ₹ 34.97 ಕೋಟಿ ಮಂಜೂರು ಮಾಡಿದೆ‘ ಎಂದು ಅನುರಾಗ್ ಮಾಹಿತಿ ನೀಡಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.