ಏಷ್ಯನ್ ಕುಸ್ತಿ ಚಾಂಪಿಯನ್‌ಷಿಪ್‌: ಬೆಳ್ಳಿ ಗೆದ್ದ ಅನ್ಶು, ರಾಧಿಕಾ ಉಲಾನ್‌ಬಾತರ್, ಮಂಗೋಲಿಯ: ಮೊದಲ ಮೂರು ಬೌಟ್‌ಗಳಲ್ಲಿ ಅಮೋಘ ಸಾಧನೆ ಮಾಡಿದ ಭಾರತದ ಅನ್ಶು ಮಲಿಕ್ ನಿರ್ಣಾಯಕ ಹಂತದಲ್ಲಿ ಮುಗ್ಗರಿಸಿದರು. ಹೀಗಾಗಿ ಏಷ್ಯನ್ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕಕ್ಕೆ ಸಮಾಧಾನಪಟ್ಟುಕೊಳ್ಳಬೇಕಾಯಿತು. 57 ಕೆಜಿ ವಿಭಾಗದ ಫೈನಲ್‌ನಲ್ಲಿ ಅಂಶು ಅವರು ಜಪಾನ್‌ನ ಸುಗುಮಿ ಸಕುರಾಯ್‌ಗೆ ಮಣಿದರು. 65 ಕೆಜಿ ವಿಭಾಗದಲ್ಲಿ ರಾಧಿಕಾ ಬೆಳ್ಳಿ ಪದಕ ಗಳಿಸಿದರು. 62 ಕೆಜಿ ವಿಭಾಗದಲ್ಲಿ ಮನೀಷಾ ಕಂಚಿನ ಪದಕ ಗಳಿಸಿದರು. ಹಿಂದಿನ ಆವೃತ್ತಿಯ ಚಾಂಪಿಯನ್, 20 ವರ್ಷದ ಹರಿಯಾಣ ಕುಸ್ತಿಪಟು ಅನ್ಶು ಮಲಿಕ್ ಮೊದಲ ಮೂರು ಬೌಟ್‌ಗಳಲ್ಲಿ ತಾಂತ್ರಿಕವಾಗಿ ಮೇಲುಗೈ ಸಾಧಿಸಿ ಜಯ ಗಳಿಸಿದ್ದರು. ಕಳೆದ ಬಾರಿ ಫೈನಲ್ ತಲುಪುವ ಮೂಲಕ ಈ ಸಾಧನೆ ಮಾಡಿದ ಭಾರತದ ಮೊದಲ ಮಹಿಳೆ ಎನಿಸಿದ್ದರು. 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಸ್ವಾತಿ ಶಿಂಧೆ ಮೊದಲ ಎರಡೂ ಬೌಟ್‌ಗಳಲ್ಲಿ ಸೋತು ಹೊರಬಿದ್ದರು. ತಾಂತ್ರಿಕ ಮೇಲುಗೈ ಸಾಧಿಸಿದ ಎದುರಾಳಿಗಳು ಅವರನ್ನು ಮಣಿಸಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.