ಏಷ್ಯನ್ ಕುಸ್ತಿ ಚಾಂಪಿಯನ್‌ಷಿಪ್‌: ತಂತ್ರಶಾಲಿ ಪಟ್ಟುಗಳಿಗೆ ಒಲಿದ ಚಿನ್ನ ಉಲನ್‌ ಬಾತಾರ್, ಮಂಗೋಲಿಯ: ಬಲಶಾಲಿ ಪಟ್ಟು ಮತ್ತು ತಂತ್ರಗಳ ಮೂಲಕ ಮಿಂಚಿದ ರವಿ ದಹಿಯಾ ಅವರು ಕುಸ್ತಿಯಲ್ಲಿ ತಮ್ಮ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತು ಮಾಡಿದರು. ಏಷ್ಯನ್ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗೆದ್ದು ಸಂಭ್ರಮಿಸಿದರು. ಆದರೆ ಬಜರಂಗ್ ಪೂನಿಯಾ ಬೆಳ್ಳಿ ಪದಕಕ್ಕೆ ಸಮಾಧಾನಪಟ್ಟುಕೊಂಡರು. ಟೋಕಿಯೊ ಒಲಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದಿದ್ದ ರವಿ ದಹಿಯಾ ಶನಿವಾರ ನಡೆದ 57 ಕೆಜಿ ವಿಭಾಗದ ಫೈನಲ್ ಬೌಟ್‌ನಲ್ಲಿ ಕಜಕಸ್ತಾನದ ರಖತ್ ಕಲ್ಜಾನ್ ವಿರುದ್ಧ ತಾಂತ್ರಿಕವಾಗಿ ಮೇಲುಗೈ ಸಾಧಿಸಿ ಗೆಲುವು ಸಾಧಿಸಿದರು. 24 ವರ್ಷದ ರವಿ ಆರಂಭಿಕ ಬೌಟ್‌ಗಳಲ್ಲಿ ಮೊದಲು ಹಿನ್ನಡೆ ಅನುಭವಿಸಿ ನಂತರ ಚೇತರಿಸಿಕೊಂಡಿದ್ದರು. ಆದರೆ ಚಿನ್ನದ ಪದಕದ ಬೌಟ್‌ನಲ್ಲಿ ಸಂಪೂರ್ಣ ಆಧಿಪತ್ಯ ಸ್ಥಾಪಿಸಿದರು. ಸೋನೆಪತ್‌ನ ನಹರಿ ಗ್ರಾಮದ ರವಿ ಮೊದಲ ಬೌಟ್‌ನಲ್ಲಿ ಜಪಾನ್‌ನ ರಿಕುಟೊ ಅರೈ ವಿರುದ್ಧ ಮತ್ತು ಎರಡನೇ ಬೌಟ್‌ನಲ್ಲಿ ಮಂಗೋಲಿಯದ ಜನಬಜರ್‌ ಜಂಡನ್‌ಬುಡ್‌ ವಿರುದ್ಧ ಜಯ ಗಳಿಸಿದ್ದರು. ಕಲ್ಜಾನ್ ಆರಂಭದಲ್ಲಿ ಭಾರತದ ಕುಸ್ತಿಪಟುವನ್ನು ನೆಲಕ್ಕೆ ಕೆಡವಿ ಸ್ವಲ್ಪ ಹೊತ್ತು ಮೇಲೇಳದಂತೆ ಮಾಡಿದರು. ನಂತರ ರವಿ ಆಧಿಪತ್ಯ ಸ್ಥಾಪಿಸಿದರು. ಎಡಗಾಲನ್ನು ಗುರಿಯಾಗಿರಿಸಿಕೊಂಡು ಆಕ್ರಮಣ ನಡೆಸಿದ ಅವರು ಸತತವಾಗಿ ಎರಡು ಪಾಯಿಂಟ್‌ಗಳನ್ನು ಗಳಿಸಿ ಮುನ್ನಡೆದರು. ಇದರಿಂದಾಗಿ ಈ ಬಾರಿ ಭಾರತಕ್ಕೆ ಮೊದಲ ಚಿನ್ನ ಗೆದ್ದುಕೊಡಲು ಅವರಿಗೆ ಸಾಧ್ಯವಾಯಿತು. 70 ಕೆಜಿ ವಿಭಾಗದಲ್ಲಿ ಗೌರವ್ ಬಲಿಯಾನ್ ಬೆಳ್ಳಿ ಪದಕ ಗಳಿಸಿದರು. ಸೀನಿಯರ್ ವಿಭಾಗದಲ್ಲಿ ಇದೇ ಮೊದಲ ಬಾರಿ ಕಣಕ್ಕೆ ಇಳಿದ ನವೀನ್ 70 ಕೆಜಿ ವಿಭಾಗದಲ್ಲಿ ಕಂಚಿನ ಪದಕ ಗಳಿಸಿದರು. ಸತ್ಯಾವರ್ತ್ ಕಾಡಿಯನ್ 97 ಕೆಜಿ ವಿಭಾಗದ ಕಂಚಿನ ಪದಕ ಗೆದ್ದುಕೊಂಡರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.