ಖೇಲೊ ಇಂಡಿಯಾ ವಿಶ್ವವಿದ್ಯಾಲಯಗಳ ಕ್ರೀಡಾಕೂಟ: ಯುವಶಕ್ತಿಯ ಕಣ; ಚಿನ್ನಕ್ಕೆ ಪಣ ಬೆಂಗಳೂರು: ಸಾಧನೆಯ ಹೊಸ ಮಜಲಿನತ್ತ ದಾಪುಗಾಲು ಇರಿಸುವ ಕನಸು ಹೊತ್ತು ಬಂದಿರುವ ದೇಶದ ‘ಯುವ‌ಶಕ್ತಿ’ಯ ಸಾಮರ್ಥ್ಯ ಪರೀಕ್ಷೆಗೆ ಇನ್ನು 10 ದಿನ ಉದ್ಯಾನ ನಗರಿ ವೇದಿಕೆಯಾಗಲಿದೆ. ಖೇಲೊ ಇಂಡಿಯಾ ವಿಶ್ವವಿದ್ಯಾಲಯಗಳ ಕ್ರೀಡಾಕೂಟಕ್ಕೆ (ಕೆಐಯುಜಿ) ಭಾನುವಾರ ಸಂಜೆ ಅಧಿಕೃತ ಚಾಲನೆ ಸಿಗಲಿದ್ದು ದೇಶದ ಎಲ್ಲ ದಿಕ್ಕುಗಳ ವಿವಿ ವಿದ್ಯಾರ್ಥಿಗಳು ತಮ್ಮ ಬಲವನ್ನು ನಿಕಷಕ್ಕೆ ಒಡ್ಡಲಿದ್ದಾರೆ. ಕೆಐಯುಜಿಯ ಮೊದಲ ಆವೃತ್ತಿ ಎರಡು ವರ್ಷಗಳ ಹಿಂದೆ ಒಡಿಶಾದಲ್ಲಿ ನಡೆದಿತ್ತು. ಎರಡನೇ ಆವೃತ್ತಿಗೆ ಕೋವಿಡ್–19 ಕಾಡಿತ್ತು. ಹೀಗಾಗಿ ಎರಡು ವರ್ಷಗಳ ನಂತರ ಮತ್ತೆ ಕ್ರೀಡಾ ಕಲರವ ಗರಿಗೆದರಿದೆ. ಕರ್ನಾಟಕದ 16 ವಿವಿಗಳು ಸೇರಿದಂತೆ ದೇಶದ 190 ವಿವಿಗಳ 4500 ಕ್ರೀಡಾಪಟುಗಳು ಪದಕಗಳಿಗಾಗಿ ಸೆಣಸಲಿದ್ದಾರೆ. ಯುವ ಕ್ರೀಡಾಪಟುಗಳಿಗೆ ಅಂತರರಾಷ್ಟ್ರೀಯ ಮಟ್ಟದ ಪ್ರಮುಖ ಕೂಟಗಳಲ್ಲಿ ಅವಕಾಶ ಗಿಟ್ಟಿಸಿಕೊಳ್ಳಲು ಕೆಐಯುಜಿ ಚಿಮ್ಮುಹಲಗೆಯಾಗಿದೆ. ಆದ್ದರಿಂದ ಇಲ್ಲಿ ಸಂಪೂರ್ಣ ಶಕ್ತಿಯನ್ನು ಹೊರಹೊಮ್ಮಿಸಿ ಸ್ಪರ್ಧಿಸಲು ಮುಂದಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿ ಸ್ಪರ್ಧೆಯೂ ರೋಮಾಂಚಕಾರಿಯಾಗುವ ನಿರೀಕ್ಷೆ ಇದೆ. ಕಳೆದ ಬಾರಿ ಸ್ಪ್ರಿಂಟ್‌ನಲ್ಲಿ ಚಿನ್ನ ಗೆದ್ದ ಒಲಿಂಪಿಯನ್ ಹಾಗೂ 100 ಮೀಟರ್ಸ್‌ ಓಟದ ಹಾಲಿ ರಾಷ್ಟ್ರೀಯ ಚಾಂಪಿಯನ್ ಒಡಿಶಾದ ದ್ಯುತಿ ಚಾಂದ್, ವೇಟ್‌ಲಿಫ್ಟಿಂಗ್‌ನಲ್ಲಿ ರಾಷ್ಟ್ರೀಯ ದಾಖಲೆ ಮಾಡಿರುವ ಕೇರಳದ ಆ್ಯನ್ ಮರಿಯಾ, ಈಜುಕೊಳದ ಚಿನ್ನದ ಮೀನು, ಆತಿಥೇಯ ಜೈನ್ ವಿವಿಯ ಶ್ರೀಹರಿ ನಟರಾಜ್, ಟ್ರ್ಯಾಕ್‌ನಲ್ಲಿ ಮಿಂಚು ಮೂಡಿಸುತ್ತಿರುವ ಸ್ಥಳೀಯ ಪ್ರತಿಭೆ ಪ್ರಿಯಾ ಮೋಹನ್ ಮುಂತಾದವರಿಗೆ ಈ ಕ್ರೀಡಾಕೂಟ ಹೊಸಹಾದಿ ತೆರೆಯಲಿದೆ. ಶೂಟಿಂಗ್‌ ಜೋಡಿ ದಿವ್ಯಾಂಶ್ ಸಿಂಗ್ ಪನ್ವಾರ್, ಐಶ್ವರ್ಯ ಪ್ರತಾಪ್ ಸಿಂಗ್ ತೋಮರ್, ಟಾಪ್ಸ್ ಯೋಜನೆಯಡಿ ಆಯ್ಕೆಯಾಗಿರುವ ಜೆಸ್ವಿನ್ ಆಲ್ಡ್ರಿನ್‌ (ಲಾಂಗ್‌ಜಂಪ್), ಯಶ್‌ವೀರ್‌ (ಜಾವೆಲಿನ್ ಥ್ರೋ), ಸಾಂಡ್ರಾ ಬಾಬು, ಆ್ಯನ್ಸ್ ಸೋಜನ್ (ಲಾಂಗ್ ಜಂಪ್), ಅಮಾನ್ (ಕುಸ್ತಿ), ಮಧು ವೇದ್ವಾನ್ (ಆರ್ಚರಿ), ಉನ್ನತಿ (ಜೂಡೊ), ಸಚಿನ್ ಸಿವಾಚ್ (ಬಾಕ್ಸಿಂಗ್), ಒಯಿನಮ್‌ ಯುವರಾಜ್ (ಫೆನ್ಸಿಂಗ್) ಮುಂತಾದವರ ಮೇಲೆಯೂ ದೃಷ್ಟಿ ನೆಟ್ಟಿದೆ. ಪ್ರತಿಭೆಗೆ ಸಾಣೆ; ಸೌಲಭ್ಯ ಅಭಿವೃದ್ಧಿಗೆ ದಾರಿ ಪ್ರಾದೇಶಿಕ ಮಟ್ಟದಲ್ಲಿ ಕ್ರೀಡಾಸೌಲಭ್ಯಗಳನ್ನು ಹೆಚ್ಚಿಸುವುದು ಖೇಲೊ ಇಂಡಿಯಾ ಯೋಜನೆಯ ಪ್ರಮುಖ ಗುರಿ. ಈ ಹಿನ್ನೆಲೆಯಲ್ಲಿ ರಾಜ್ಯದ ಕ್ರೀಡಾಭಿವೃದ್ಧಿಯ ಮೇಲೆ ಕೆಯುಐಜಿ ಪರಿಣಾಮ ಬೀರುವ ನಿರೀಕ್ಷೆ ಇದೆ. ಸ್ಥಳೀಯ ಕ್ರೀಡಾಪಟುಗಳ ಪ್ರತಿಭೆಗೆ ಸಾಣೆ ಹಿಡಿಯುವುದಕ್ಕೂ ಈ ಕ್ರೀಡಾಕೂಟ ನೆರವಾಗುವ ಭರವಸೆ ಇದೆ. ಕಳೆದ ಬಾರಿ ಕರ್ನಾಟಕದ 10 ವಿವಿಗಳು ಕನಿಷ್ಠ ಒಂದು ಪದಕವನ್ನಾದರೂ ಗೆದ್ದುಕೊಂಡಿವೆ. ಈ ಬಾರಿಯೂ ರಾಜ್ಯದ ವಿವಿಗಳು ಗಣನೀಯ ಸಂಖ್ಯೆಯಲ್ಲಿ ಸ್ಪರ್ಧಿಗಳನ್ನು ಕಣಕ್ಕೆ ಇಳಿಸಿವೆ. ಅಥ್ಲೆಟಿಕ್ಸ್‌ನಲ್ಲಿ ಕಳೆದ ಬಾರಿ ಕರ್ನಾಟಕ ಮೊದಲ ಸ್ಥಾನ ಗಳಿಸಿತ್ತು. ಮಂಗಳೂರು ವಿವಿ 7 ಚಿನ್ನದೊಂದಿಗೆ 18 ಪದಕ ಗೆದ್ದುಕೊಂಡಿತ್ತು. ಈಜಿನಲ್ಲಿ ಜೈನ್ ವಿವಿ 7 ಚಿನ್ನದೊಂದಿಗೆ 14 ಪದಕ, ರಾಜೀವ ಗಾಂಧಿ ವಿವಿ 3 ಚಿನ್ನದೊಂದಿಗೆ 6 ಪದಕ ಗೆದ್ದಿತ್ತು. ಕುಸ್ತಿಯಲ್ಲಿ ರಾಣಿ ಚೆನ್ನಮ್ಮ ವಿವಿ ಕಂಚು ಗಳಿಸಿತ್ತು. ವೇಟ್‌ಲಿಫ್ಟಿಂಗ್‌ನಲ್ಲಿ 2 ಚಿನ್ನ ಸೇರಿದಂತೆ 4 ಪದಕಗಳು ಮಂಗಳೂರು ವಿವಿ ಪಾಲಾಗಿದ್ದವು. ವಾಲಿಬಾಲ್‌ನಲ್ಲಿ ಮೈಸೂರು ವಿವಿ ಚಿನ್ನ ಗೆದ್ದುಕೊಂಡಿತ್ತು. ಕಬಡ್ಡಿಯಲ್ಲಿ ಮಂಗಳೂರು ವಿವಿ ಕಂಚು ಗಳಿಸಿತ್ತು. ಬ್ಯಾಡ್ಮಿಂಟನ್‌ನಲ್ಲಿ ಜೈನ್ ವಿವಿಗೆ ಚಿನ್ನ, ಹಾಕಿಯಲ್ಲಿ ಬೆಂಗಳೂರು ವಿವಿಗೆ ಬೆಳ್ಳಿ ಗೆದ್ದುಕೊಂಡಿತ್ತು. ಈ ಬಾರಿ ಮನೆಯಂಗಳದಲ್ಲೇ ಕೂಟ ನಡೆಯುತ್ತಿದೆ. ಆದ್ದರಿಂದ ಪದಕಗಳ ಬೇಟೆಗೆ ಇನ್ನಷ್ಟು ಬಲ ತುಂಬಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.