ತರುಣದೀಪ್‌– ರಿಧಿಗೆ ಚಿನ್ನ ಅಂತಲ್ಯ, ಟರ್ಕಿ: ನಿಖರ ಗುರಿಯ ಮೂಲಕ ಗಮನಸೆಳೆದ ತರುಣದೀಪ್ ರಾಯ್ ಮತ್ತು ರಿಧಿ ಫೋರ್ ಆರ್ಚರಿ ಸ್ಟೇಜ್ 1 ವಿಶ್ವಕಪ್ ಟೂರ್ನಿಯಲ್ಲಿ ಭಾರತಕ್ಕೆ ಎರಡನೇ ಚಿನ್ನದ ಪದಕ ಗೆದ್ದುಕೊಟ್ಟರು. ಇಲ್ಲಿ ನಡೆಯುತ್ತಿರುವ ಟೂರ್ನಿಯ ಮಿಶ್ರ ಜೋಡಿ ವಿಭಾಗದ ಫೈನಲ್‌ನಲ್ಲಿ ಭಾನುವಾರ ಭಾರತದ ಬಿಲ್ಗಾರರು ಶೂಟ್‌ ಆಫ್‌ನಲ್ಲಿ 5–4ರಿಂದ ಗ್ರೇಟ್‌ ಬ್ರಿಟನ್‌ನ ಬ್ರಿಯೊನಿ ಪ್ರಿಟ್‌ಮನ್‌ ಮತ್ತು ಅಲೆಕ್ಸ್ ವೈಸ್‌ ಅವರನ್ನು ಸೋಲಿಸಿದರು. ಅಮೆರಿಕದ ಗೇಬ್ರಿಯಲ್ ಸೆಸಾಯಿ ಮತ್ತು ಬ್ರಾಡಿ ಎಲಿಸನ್‌, ಸ್ಪೇನ್ನ ಎಲಿಯಾ ಕೆನಾಲೆಸ್‌ ಮತ್ತು ಮಿಗುವೆಲ್ ಅಲ್ವಾರಿನೊ ಗಾರ್ಸಿಯಾ ಅವರನ್ನು ಸೋಲಿಸಿ ಕಂಚಿನ ಪದಕ ಗೆದ್ದುಕೊಂಡರು. ಫೈನಲ್‌ ಹಣಾಹಣಿಯ ಆರಂಭದಲ್ಲಿ 0–2ರ ಸೆಟ್‌ ಹಿನ್ನಡೆಯಲ್ಲಿದ್ದ ತರುಣದೀಪ್– ರಿಧಿ ಬಳಿಕ ಪುಟಿದೆದ್ದು ಗೆಲುವು ಒಲಿಸಿಕೊಂಡರು. ಈ ಜೋಡಿಗೆ ವಿಶ್ವಕಪ್‌ನಲ್ಲಿ ಒಲಿದ ಚೊಚ್ಚಲ ಚಿನ್ನ ಇದು. ಭಾರತ ತಂಡಕ್ಕೂ ಮಿಶ್ರ ಜೋಡಿ ವಿಭಾಗದಲ್ಲಿ ಇದು ಮೊದಲ ಚಿನ್ನದ ಸಂಭ್ರಮ. ಈ ಗೆಲುವಿನೊಂದಿಗೆ ಭಾರತ ತಂಡವು ವರ್ಷದ ಮೊದಲ ವಿಶ್ವಕಪ್ ಟೂರ್ನಿಯನ್ನು ಎರಡು ಚಿನ್ನದ ಪದಕಗಳೊಂದಿಗೆ ಕೊನೆಗೊಳಿಸಿತು. ಶನಿವಾರ ಪುರುಷರ ಕಾಂಪೌಂಡ್‌ ತಂಡ ವಿಭಾಗದಲ್ಲಿ ಅಭಿಷೇಕ್‌ ವರ್ಮಾ, ರಜತ್ ಚೌಹಾನ್ ಮತ್ತು ಅಮನ್ ಸೈನಿ ಚಿನ್ನ ಕೊರಳಿಗೇರಿಸಿಕೊಂಡಿದ್ದರು. 38 ವರ್ಷದ ತರುಣದೀಪ್‌ 2010ರಲ್ಲಿ ಗುವಾಂಗ್‌ಜೌ ಏಷ್ಯನ್‌ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದರು. 17 ವರ್ಷದ ರಿಧಿಗೆ ಇದು ಮೊದಲ ವಿಶ್ವಕಪ್ ಪದಕವಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.