ಇಮೊಲಾ ರೇಸ್‌ನಲ್ಲಿ ಮಿಂಚಿದ ಜೆಹಾನ್‌ ಇಮೊಲಾ, ಇಟಲಿ: ಭಾರತದ ಜೆಹಾನ್ ದಾರುವಾಲಾ ಅವರು ಇಲ್ಲಿ ನಡೆದ ಫಾರ್ಮುಲಾ 2 ಚಾಂಪಿಯನ್‌ಷಿಪ್‌ನ ಸ್ಪ್ರಿಂಟ್‌ ರೇಸ್‌ನಲ್ಲಿ ಎರಡನೇ ಸ್ಥಾನ ಗಳಿಸಿದರು. ಪ್ರೆಮಾ ರೇಸಿಂಗ್‌ ಚಾಲಕ ದಾರುವಾಲಾ ಇಲ್ಲಿ ನಡೆದ ಜಿದ್ದಾಜಿದ್ದಿ ರೇಸ್‌ನ ಆರಂಭದಲ್ಲಿ ಮೂರನೇ ಸ್ಥಾನದಲ್ಲಿದ್ದರು. ಬಳಿಕ ವೇಗ ಹೆಚ್ಚಿಸುವ ಮೂಲಕ ‘ಪೋಡಿಯಂ ಫಿನಿಶ್‘ ಮಾಡಿದರು. ನ್ಯೂಜಿಲೆಂಡ್‌ ಚಾಲಕ, ಹೈಟೆಕ್‌ ಗ್ರಾನ್‌ಪ್ರಿ ಪ್ರತಿನಿಧಿಸಿದ್ದ ಮಾರ್ಕಸ್‌ ಆರ್ಮ್‌ಸ್ಟ್ರಾಂಗ್‌ ಪ್ರಶಸ್ತಿಗೆ ಮುತ್ತಿಟ್ಟರು. ಪ್ರೆಮಾ ರೇಸಿಂಗ್‌ನ ಡೆನ್ನಿಸ್‌ ಹ್ಯುಜರ್‌ (ಇಟಲಿ) ಮೂರನೇ ಸ್ಥಾನ ಗಳಿಸಿದರು. ಜೆಹಾನ್‌ ಇಲ್ಲಿ ಎರಡನೇ ಸ್ಥಾನ ಗಳಿಸುವ ಮೂಲಕ ಈ ಋತುವಿನಲ್ಲಿ ಎರಡನೇ ಬಾರಿ ‘ಪೋಡಿಯಂ ಫಿನಿಶ್’ ಮಾಡಿದರು. ಫಾರ್ಮುಲಾ 2 ಚಾಂಪಿಯನ್‌ಷಿಪ್‌ನಲ್ಲಿ ಒಟ್ಟಾರೆ 10ನೇ ಬಾರಿ ಅವರು ಈ ಸಾಧನೆ ಮಾಡಿದ್ದಾರೆ. ‘ರೇಸ್‌ನಲ್ಲಿ ನನಗೆ ಉತ್ತಮ ಆರಂಭ ಸಿಕ್ಕಿತ್ತು. ಆದರೆ ಅಮೆರಿಕದ ಲೋಗಾನ್ ಸೆರ್ಜೆಂಟ್‌ ಅವರನ್ನು ಹಿಂದಿಕ್ಕುವ ವೇಳೆ ಲಯ ತಪ್ಪಿತು. ಹೀಗಾಗಿ ಮಾರ್ಕಸ್‌ ಅವರ ವೇಗ ಮೀರಲು ಸಾಧ್ಯವಾಗಲಿಲ್ಲ‘ ಎಂದು ಜೆಹಾನ್ ಹೇಳಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.