ಏಷ್ಯನ್ ಕುಸ್ತಿ ಚಾಂಪಿಯನ್‌ಷಿಪ್‌: ದೀಪಕ್‌ ಪೂನಿಯಾ ಬೆಳ್ಳಿ ನಗು ಉಲಾನ್‌ಬಾತರ್‌, ಮಂಗೋಲಿಯಾ: ಭಾರತದ ದೀಪಕ್ ಪೂನಿಯಾ ಅವರಿಗೆ ಕಜಕಸ್ತಾನದ ಅಜ್ಮತ್‌ ದೌಲತ್‌ಬೆಕೊವ್ ತಂತ್ರಗಳಿಗೆ ಪ್ರತಿತಂತ್ರ ಹೆಣೆಯಲು ಸಾಧ್ಯವಾಗಲಿಲ್ಲ. ಏಷ್ಯನ್ ಕುಸ್ತಿ ಚಾಂಪಿಯನ್‌ಷಿಪ್‌ನ 86 ಕೆಜಿ ವಿಭಾಗದಲ್ಲಿ ಅವರು ಬೆಳ್ಳಿ ಪದಕಕ್ಕೆ ಸಮಾಧಾನಪಡಬೇಕಾಯಿತು. 92 ಕೆಜಿ ವಿಭಾಗದಲ್ಲಿ ವಿಕಿ ಚಾಹರ್ ಕಂಚು ಗೆದ್ದುಕೊಂಡರು. ಇಲ್ಲಿ ನಡೆಯುತ್ತಿರುವ ಚಾಂಪಿಯನ್‌ಷಿಪ್‌ನಲ್ಲಿ ಒಂದೂ ಪಾಯಿಂಟ್ಸ್ ಬಿಟ್ಟುಕೊಡದೇ ಫೈನಲ್ ಪ್ರವೇಶಿಸಿದ್ದ ದೀಪಕ್‌, ಚಿನ್ನದ ಪದಕದ ಸುತ್ತಿನಲ್ಲಿ 1–6ರಿಂದ ಅಜ್ಮತ್‌ ಅವರಿಗೆ ಮಣಿದರು. ಇದಕ್ಕೂ ಮೊದಲು ದೀಪಕ್‌ 6–0ಯಿಂದ ಇರಾನ್‌ನ ಮೊಹಸೆನ್‌ ಮೀರ್‌ಯೂಸುಫ್‌ ಮತ್ತು 5–0ಯಿಂದ ಕೊರಿಯಾದ ಗ್ವಾನುಕ್ ಕಿಮ್ ಅವರನ್ನು ಚಿತ್ ಮಾಡಿದ್ದರು. ಫೈನಲ್‌ ಬೌಟ್‌ನಲ್ಲಿ ಭಾರತದ ಪೈಲ್ವಾನ ಆಕ್ರಮಣಕಾರಿ ನಡೆಗಳನ್ನು ಪ್ರಯೋಗಿಸಲು ದೌಲತ್‌ಬೆಕೊವ್ ಅವಕಾಶ ಮಾಡಿಕೊಡಲಿಲ್ಲ. ಹೆಚ್ಚು ಅಂತರ ಕಾಯ್ದುಕೊಳ್ಳುವ ಮೂಲಕ ‘ಲೆಗ್‌ ಅಟ್ಯಾಕ್‌’ ತಂತ್ರಗಳಿಗೂ ಶರಣಾಗಲಿಲ್ಲ. ಆದರೆ ಪ್ರತಿದಾಳಿಗಳನ್ನು ಯಶಸ್ವಿಯಾಗಿ ನಡೆಸಿದ ಕಜಕಸ್ತಾನ ಪೈಲ್ವಾನ ಗೆಲುವು ಒಲಿಸಿಕೊಂಡರು. ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ದೀಪಕ್ ಅವರಿಗೆ ಇದು ನಾಲ್ಕನೇ ಪದಕ. 2021ರಲ್ಲಿ ಬೆಳ್ಳಿ, 2019 ಮತ್ತು 2020ರಲ್ಲಿ ಕಂಚು ಗೆದ್ದುಕೊಂಡಿದ್ದರು. ಕಂಚಿನ ಪದಕದ ಸುತ್ತಿನಲ್ಲಿ ವಿಕಿ 5–3ರಿಂದ ಉಜ್ಬೆಕಿಸ್ತಾನದ ಅಜಿನಿಯಾಜ್‌ ಸಪರ್ನಿಯಜೊವ್ ಅವರನ್ನು ಮಣಿಸಿದರು. 61 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಮಂಗಲ್ ಕಡಿಯಾನ್‌ ಕಂಚಿನ ಪದಕದ ಬೌಟ್‌ನಲ್ಲಿ 4–6ರಿಂದ ಕಿರ್ಗಿಸ್ತಾನದ ಉಲುಕ್‌ಬೆಕ್‌ ಜೊಲ್ಡೊಶ್‌ಬೆಕೊವ್ ಎದುರು ಎಡವಿದರು. ಯಶ್‌ ಟುನಿರ್‌ (74 ಕೆಜಿ) ಅರ್ಹತಾ ಬೌಟ್‌ನಲ್ಲಿ, ಅನಿರುದ್ಧ ಕುಮಾರ್‌ (125 ಕೆಜಿ) ಕ್ವಾರ್ಟರ್‌ಫೈನಲ್ ಬೌಟ್‌ನಲ್ಲಿ ಸೋತರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.