ತಂದೆಯ ನೆನಪು; ನನಸಾದ ಕೋಮಲ್ ಚಿನ್ನದ ಕನಸು ಬೆಂಗಳೂರು: ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೀಟ್ ಆಗಿದ್ದ ಕೋಮಲ್ ಕೊಹರ್‌ ವೃತ್ತಿಜೀವನದ ಪಥ ಬದಲಿಸಲು ಕಾರಣರಾದವರು ತಂದೆ. ಆದರೆ ಮಗಳು ಚಿನ್ನದ ಸಾಧನೆ ಮಾಡುವ ಎತ್ತರಕ್ಕೇರುವಷ್ಟರಲ್ಲಿ ಅವರು ಬದುಕಿರಲಿಲ್ಲ. ಖೇಲೊ‌ ಇಂಡಿಯಾ ವಿಶ್ವವಿದ್ಯಾಲಯಗಳ ಕ್ರೀಡಾಕೂಟದ ಎರಡನೇ ಆವೃತ್ತಿಯ ಮೊದಲ ಚಿನ್ನದ ಒಡತಿ ಕೋಮಲ್, ಪದಕ ಗೆದ್ದ ನಂತರ ತಂದೆಯ ನೆನಪಿನಲ್ಲಿ ಭಾವುಕರಾದರು. ಹರಿಯಾಣದ ಸೋನಿಪತ್‌ ನಿವಾಸಿ ಕೋಮಲ್, ರೋಹ್ಟಕ್‌ನ ಮಹರ್ಷಿ ದಯಾನಂದ ವಿಶ್ವವಿದ್ಯಾಲಯವನ್ನು ಪ್ರತಿನಿಧಿಸುತ್ತಿದ್ದಾರೆ. ವೇಟ್‌ಲಿಫ್ಟರ್‌ಗಳ ಊರಾದ ಖಖೋಡದಲ್ಲಿ ಜನಿಸಿದ ಅವರು ಓಟದಲ್ಲಿ ಸಾಧನೆ ಮಾಡುವ ಕನಸು ಹೊತ್ತುಕೊಂಡಿದ್ದರು. ಆದರೆ ತಂದೆಯ ಪ್ರೇರಣೆಯಿಂದ ವೇಟ್‌ಲಿಫ್ಟಿಂಗ್‌ ಕಡೆಗೆ ವಾಲಿದರು. ಕಳೆದ ಬಾರಿ ವಾರ್ಸಿಟಿ ಗೇಮ್ಸ್‌ನಲ್ಲಿ ಬೆಳ್ಳಿ ಗೆದ್ದಿದ್ದ ಅವರ ಚಿನ್ನದ ಕಸನು ಈ ಬಾರಿ ನನಸಾಯಿತು. ಸ್ನ್ಯಾಚ್, ಕ್ಲೀನ್ ಮತ್ತು ಜೆರ್ಸಿಯಲ್ಲಿ ದಾಖಲೆಯನ್ನೂ ಮಾಡಿದರು. 19 ವರ್ಷದ ಕೋಮಲ್ ಈಗ ಬಿಎ ಎರಡನೇ ವರ್ಷದ ವಿದ್ಯಾರ್ಥಿನಿ. ಕಳೆದ ಡಿಸೆಂಬರ್‌ನಲ್ಲಿ ಅಂತರ ವಿವಿ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದ ಅವರು ಈ ವರ್ಷ ಮಾರ್ಚ್‌ನಲ್ಲಿ ನಡೆದ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ದಾಖಲೆಯೊಂದಿಗೆ ಚಿನ್ನ ಗಳಿಸಿದ್ದರು. ಈ ಸಾಧನೆಗಳನ್ನು ಕಣ್ಣುತುಂಬಿಕೊಳ್ಳಲು ತಂದೆ ಇರಲಿಲ್ಲ. ಸುದೀರ್ಘ ಕಾಲದ ಅನಾರೋಗ್ಯದಿದಾಗಿ ಅವರು ವರ್ಷದ ಹಿಂದೆ ಸಾವಿಗೀಡಾಗಿದ್ದರು. ಜೈನ್ ವಿಶ್ವವಿದ್ಯಾಲಯ ಆವರಣದಲ್ಲಿ ಭಾನುವಾರ ನಡೆದ ಮಹಿಳೆಯರ 45 ಕೆಜಿ ವಿಭಾಗದಲ್ಲಿ ಕೋಮಲ್ 160 (70 ಕೆಜಿ ಸ್ನ್ಯಾಚ್‌, 90 ಕೆಜಿ ಕ್ಲೀನ್ ಆ್ಯಂಡ್ ಜರ್ಕ್‌) ಕೆಜಿ ಭಾರ ಎತ್ತಿದರು. ಅದಮಾಸ್ ವಿವಿಯ ಚಂದ್ರಿಕಾ ಮತ್ತು ಶಿವಾಜಿ ವಿವಿಯ ಪ್ರತೀಕ್ಷಾ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದುಕೊಂಡರು. ಚಂದ್ರಿಕಾ 147 (64+83) ಕೆಜಿ ಭಾರ ಎತ್ತಿದರೆ, ಪ್ರತೀಕ್ಷಾ 143 (63+80) ಕೆಜಿ ಸಾಧನೆ ಮಾಡಿದರು. ಸ್ನೇಹಾ ಸೊರೇನ್‌ಗೆ ಚಿನ್ನ ಒಡಿಶಾದ ಭುವನೇಶ್ವರದಲ್ಲಿರುವ ಕಳಿಂಗ ಕೈಗಾರಿಕಾ ತಾಂತ್ರಿಕ ವಿಶ್ವವಿದ್ಯಾಲಯದ (ಕೆಐಐಟಿಯು) ಸ್ನೇಹಾ ಸೊರೇನ್ ಕೂಡ ವೇಟ್‌ಲಿಫ್ಟಿಂಗ್‌ನಲ್ಲಿ ಚಿನ್ನ ಗೆದ್ದುಕೊಂಡರು. ಮಹಿಳೆಯರ 49 ಕೆಜಿ ವಿಭಾಗದಲ್ಲಿ ಅವರು ಈ ಸಾಧನೆ ಮಾಡಿದರು. ಅವರು ಸ್ನ್ಯಾಚ್‌ನಲ್ಲಿ 69 ಕೆಜಿ, ಕ್ಲೀನ್ ಆ್ಯಂಡ್‌ ಜರ್ಕ್‌ನಲ್ಲಿ 92 ಕೆಜಿ ಭಾರ ಎತ್ತಿದರು. ಶಿವಾಜಿ ವಿವಿಯ ಸರಿತಾ ಮತ್ತು ಹರಿಯಾಣದ ಕುರುಕ್ಷೇತ್ರ ವಿವಿಯ ಶಾಲು ಕ್ರಮವಾಗಿ ಬೆಳ್ಳಿ‌ ಮತ್ತು ಕಂಚಿನ ಪದಕ ಗೆದ್ದುಕೊಂಡರು. ಭಾರತ ಕ್ರೀಡಾ ಪ್ರಾಧಿಕಾರದ ಆವರಣದಲ್ಲಿ ನಡೆದ ಶೂಟಿಂಗ್‌ನ 10 ಮೀ ಏರ್‌ ರೈಫಲ್‌ನಲ್ಲಿ ಆಂಧ್ರಪ್ರದೇಶದ ಕೆಎಲ್‌ ವಿವಿಯ ಮದ್ದಿನೇನಿ ಮಹೇಶ್ ಚಿನ್ನ ಗಳಿಸಿದರು. ಡೆಲ್ಲಿ ವಿವಿಯ ಪಾರ್ಥ್ ಮಖೀಜ ಮತ್ತು ಸಾವಿತ್ರಿಬಾಯಿ ಫುಲೆ ವಿವಿಯ ಗಜಾನನ ಕ್ರಮವಾಗಿ ಬೆಳ್ಳಿ ಮತ್ತು ಕಂಚು ಗೆದ್ದರು. ಪುರುಷರ 55 ಕೆಜಿ ವಿಭಾಗದ ವೇಟ್‌ಲಿಫ್ಟಿಂಗ್‌ನಲ್ಲಿ ಪಂಡಿತ್ ರವಿಶಂಕರ್ ಶುಕ್ಲಾ ವಿವಿಯ ವಿಜಯ್ ಪಂಡಿತ್‌ ಚಿನ್ನ ಗೆದ್ದುಕೊಂಡರು. ಇದೆ ವಿವಿಯ ಬಿ.ಕೋಮಲ್ ಕಂಚಿನ ಪದಕ ಗಳಿಸಿದರು. ಬಹಿನ್‌ಬಾಯಿ ಚೌಧರಿ ವಿವಿಯ ಎಸ್‌.ಉದಯ್ ಬೆಳ್ಳಿ ಪಡೆದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.