ವಿಶ್ವಕಪ್ ಸ್ಟೇಜ್ 1 ಆರ್ಚರಿ: ಚಿನ್ನಕ್ಕೆ ಗುರಿಯಿಟ್ಟ ಭಾರತ ತಂಡ ಅಂತಲ್ಯ: ರೋಚಕ ಹಣಾಹಣಿಯಲ್ಲಿ ಭಾರತ ಪುರುಷರ ಕಾಂಪೌಂಡ್ ತಂಡವು ಫ್ರಾನ್ಸ್ ತಂಡವನ್ನು ಮಣಿಸಿವಿಶ್ವಕಪ್ ಸ್ಟೇಜ್ 1 ಆರ್ಚರಿ ಟೂರ್ನಿಯಲ್ಲಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದೆ. ಇಲ್ಲಿ ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಅಭಿಷೇಕ್ ವರ್ಮಾ, ರಜತ್ ಚೌಹಾನ್‌ ಮತ್ತು ಅಮನ್ ಸೈನಿ ಅವರನ್ನೊಳಗೊಂಡ ಭಾರತ ತಂಡವು 232–231ರಿಂದ ಫ್ರಾನ್ಸ್‌ನ ಜೀನ್ ಫಿಲಿಪ್‌ ಬೌಲ್ಚ್‌, ಕ್ವೆಂಟಿನ್ ಬೇರಾಯರ್ ಮತ್ತು ಆ್ಯಡ್ರಿಯನ್‌ ಗೊಂಟಿಯರ್ ಅವರನ್ನು ಸೋಲಿಸಿದರು. ಐದು ವರ್ಷಗಳ ಬಳಿಕ ವಿಶ್ವಕಪ್‌ನಲ್ಲಿ ಭಾರತ ಪುರುಷರ ಕಾಂಪೌಂಡ್‌ ತಂಡವು ಚಿನ್ನ ಜಯಿಸಿದೆ. 2017ರಲ್ಲಿ ಶಾಂಘೈನಲ್ಲಿ ತಂಡವು ಅಗ್ರಸ್ಥಾನ ಗಳಿಸಿತ್ತು. ಈ ಟೂರ್ನಿಯಲ್ಲಿ ಮತ್ತೊಂದು ಪದಕವನ್ನು ಗೆಲ್ಲುವ ಅವಕಾಶವನ್ನು ಭಾರತ ಕಳೆದುಕೊಂಡಿತು. ಅಭಿಷೇಕ್ ವರ್ಮಾ– ಮುಸ್ಕಾನ್ ಕಿರಾರ್‌ ಮಿಶ್ರ ಜೋಡಿ ವಿಭಾಗದ ಕಂಚಿನ ಪದಕದ ಪ್ಲೇ ಆಫ್‌ನಲ್ಲಿ 156–157ರಿಂದ ಕ್ರೊವೇಷ್ಯಾ ತಂಡಕ್ಕೆ ಸೋತಿತು. ‘ಈ ಟೂರ್ನಿಗಾಗಿಯೇ ನಾವು ವಿಶೇಷವಾಗಿ ತಯಾರಿ ನಡೆಸಿದ್ದೆವು. ಮಾನಸಿಕವಾಗಿ ಬಲಿಷ್ಠವಾಗಿದ್ದೆವು. ಮುಂಬರುವ ಏಷ್ಯನ್ ಗೇಮ್ಸ್‌ನಲ್ಲೂ ಇದೇ ರೀತಿಯ ಸಾಮರ್ಥ್ಯ ತೋರುವ ಬಯಕೆಯಿದೆ‘ ಎಂದು 24 ವರ್ಷದ ಅಮನ್ ಸೈನಿ ಹೇಳಿದ್ದಾರೆ. ತರುಣದೀಪ್ ರಾಯ್‌ ಮತ್ತು ರಿಧಿ ಫೊರ್ ಅವರು ರಿಕರ್ವ್‌ ಮಿಶ್ರ ಜೋಡಿ ವಿಭಾಗದಲ್ಲಿಭಾನುವಾರ ಚಿನ್ನದ ಪದಕಕ್ಕಾಗಿ ಸೆಣಸಲಿದ್ದಾರೆ. ಭಾರತದ ಜೋಡಿಯು ಸೆಮಿಫೈನಲ್‌ನಲ್ಲಿ 5–3ರಿಂದ ಸ್ಪೇನ್ ತಂಡಕ್ಕೆ ಸೋಲುಣಿಸಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.